ಬ್ರಿಕ್ಸ್ ದೇಶಗಳು ಅಮೆರಿಕ ವಿರೋಧಿ ನೀತಿಯನ್ನು ಬೆಂಬಲಿಸಿದರೆ ಆ ದೇಶಗಳ ಮೇಲೆ ಹೆಚ್ಚುವರಿಯಾಗಿ ಶೇ.10 ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಯನ್ನು ಖಂಡಿಸಿದ ಬಳಿಕ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್ ಬ್ರಿಕ್ಸ್ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಅಮೆರಿಕ ವಿರೋಧಿ ನೀತಿಗಳನ್ನು ಬೆಂಬಲಿಸುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ ಶೇ. 10 ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ ಎಂದು ಟ್ರಂಪ್ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಇದಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದೂ ತಿಳಿಸಿದ್ದಾರೆ.
ಟ್ರಂಪ್ ಹೇಳಿಕೆ ನೀಡುವ ಒಂದು ದಿನದ ಮೊದಲು ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ)ನಾಯಕರು ಅಮೆರಿಕದ ಅನಿಯಂತ್ರಿತ ಸುಂಕ ನೀತಿಯನ್ನು ಟೀಕಿಸಿದ್ದರು. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ನ ಮಿಲಿಟರಿ ಕ್ರಮವನ್ನು ಟೀಕಿಸಲಾಗಿತ್ತು.
ಶೃಂಗಸಭೆಯ ಮೊದಲು ಬ್ರಿಕ್ಸ್ ದೇಶಗಳು ಅಮೆರಿಕದ ಮೇಲೆ ನೇರವಾಗಿ ದಾಳಿ ಮಾಡಲಿಲ್ಲ, ಆದರೆ ಹೆಚ್ಚುತ್ತಿರುವ ಸುಂಕವು ಜಾಗತಿಕ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಮತ್ತು ಅದು ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಮಿಲಿಟರಿ ವೆಚ್ಚವನ್ನು ಹೆಚ್ಚಿಸುವ ನೇಟೋ ನಿರ್ಧಾರವನ್ನು ಟೀಕಿಸಿದರು.