ಆನ್ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದ್ದು, ಹೊಸ ತಿದ್ದುಪಡಿ ಮಸೂದೆ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ಧಪಡಿಸಲಾಗಿದೆ. ಮುಂಬರುವ ಅಧಿವೇಶನದಲ್ಲಿ ಈ ಮಸೂದೆ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರಸ್ತಾಪಿತ ಕಾನೂನು ಪ್ರಕಾರ ಗೇಮ್ ಆಫ್ ಚಾನ್ಸ್ ಅಂದರೆ ಯಾವುದೇ ಆಟ, ಸ್ಪರ್ಧೆಯ ಫಲಿತಾಂಶಗಳು ಅದೃಷ್ಟದಿಂದ ಅವಲಂಬಿತವಾಗಿರುವ, ಅನಿಶ್ಚಿತತೆಗಳಿಂದ ಕೂಡಿರುವ ಆನ್ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಅಥವಾ ಪಂಥ ಕಟ್ಟುವ ಚಟುವಟಿಕೆಗಳು ನಿಷಿದ್ಧ. ಪಂಥ ಕಟ್ಟುವುದು, ಹಣ ಇಡುವುದು, ಟೋಕನ್, ವರ್ಚುವಲ್ ಕರೆನ್ಸಿ ಅಥವಾ ಇ-ಫಂಡ್ ಇಟ್ಟು ಅಂತರ್ಜಾಲ, ಮೊಬೈಲ್ ಆಪ್ ಅಥವಾ ಇತರ ಡಿಜಿಟಲ್ ವೇದಿಕೆಗಳ ಮೂಲಕ ಆಡುವ ಆಟಗಳ ನಿಷೇಧ. ನೋಂದಾಯಿತವಲ್ಲದ ವೇದಿಕೆಗಳ ಮೂಲಕ ಇಂಥ ಆನ್ ಲೈನ್ ಬೆಟ್ಟಿಂಗ್, ಗ್ಯಾಮ್ಲಿಂಗ್ ಸೇವೆ ಕೊಡುವುದನ್ನು ನಿಷೇಧಿಸಲು ಅವಕಾಶ ಇದೆ.
ಕರ್ನಾಟಕ ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಯಂತ್ರಣ ಪ್ರಾಧಿಕಾರ ರಚನೆಗೆ ಮಸೂದೆಯಲ್ಲಿ ಅವಕಾಶ ಇದೆ. ಪ್ರಾಧಿಕಾರ ಹೊಸ ಕಾನೂನಿನಂತೆ ನಿಯಮಗಳ ಜಾರಿ, ಅನುಪಾಲನೆ, ಆನ್ ಲೈನ್ ಗೇಮಿಂಗ್ ಹಾಗೂ ಗ್ಯಾಂಬ್ಲಿಂಗ್ ನಿಯಂತ್ರಣದ ಮೇಲೆ ನಿಗಾ ಇಡಲಿದೆ. ಪ್ರಾಧಿಕಾರಕ್ಕೆ ಕಾನೂನು, ಸಾರ್ವಜನಿಕ ಆಡಳಿತ, ತಂತ್ರಜ್ಞಾನದ ಅನುಭವ ಹೊಂದಿರುವವರನ್ನು ರಾಜ್ಯ ಸರ್ಕಾರ ಅಧ್ಯಕ್ಷರಾಗಿ ನೇಮಿಸಲು ಅವಕಾಶ ಇದೆ. ಮೂವರು ಸದಸ್ಯರನ್ನು ನೇಮಕ ಮಾಡಲಾಗುತ್ತದೆ. ಹೊಸ ಮಸೂದೆ ಪ್ರಕಾರ ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು, 5 ಲಕ್ಷ ದಂಡದ ಶಿಕ್ಷೆ ವಿಧಿಸಲು ಅವಕಾಶ ಇದೆ.