ಮಧ್ಯಪ್ರದೇಶದ ಸರ್ಕಾರಿ ಕಾಲೇಜಿನಲ್ಲಿ ಕಾಲೇಜು ಯುವಜನೋತ್ಸವ ವೇಳೆ ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುತ್ತಿದ್ದ ಕೋಣೆಯ ಕಿಟಕಿ ಮೂಲಕ ಕದ್ದು ಇಣುಕಿ ವೀಡಿಯೊ ರೆಕಾರ್ಡ್ ಮಾಡಿದ ಮತ್ತು ಪೋಟೊ ತೆಗೆಯುತ್ತಿದ್ದ ಮೂವರು ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮಂದ್ಸೌರ್ ಜಿಲ್ಲೆಯ ಭಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಕೃತ್ಯ ಗೊತ್ತಾಗುತ್ತಿದ್ದಂತೆಯೇ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಪ್ರಾಂಶುಪಾಲರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರಿಗೆ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಎಬಿವಿಪಿ ನಗರಾಧ್ಯಕ್ಷ ಉಮೇಶ್ ಜೋಶಿ, ಸಹ ಕಾಲೇಜು ಮುಖಂಡ ಅಜಯ್ ಗೌರ್ ಹಾಗೂ ಕಾರ್ಯಕರ್ತ ಹಿಮಾಂಶು ಬೈರಾಗಿ ಎಂದು ಗುರುತಿಸಲಾಗಿದೆ. ಸಿಸಿಟಿವಿ ರೆಕಾರ್ಡ್ ಆಧರಿಸಿ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯದ ಆದೇಶದನ್ವಯ ಗರೋತ್ ಸಬ್ ಜೈಲಿಗೆ ಕಳುಹಿಸಲಾಗಿದೆ. ನಾಲ್ಕನೇ ಆರೋಪಿ ಹರಿಸಿಂಗ್ ಬಂಜಾರ ಎಂಬಾತನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುತ್ತಿದ್ದಾಗ ನಾಲ್ವರು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಬಳಸಿ ಕಿಟಕಿಯ ಮೂಲಕ ವೀಡಿಯೊ ಮಾಡಿ, ಪೋಟೊ ತೆಗೆದುಕೊಂಡಿದ್ದಾರೆ. ಇದನ್ನು ಕಂಡ ವಿದ್ಯಾರ್ಥಿನಿಯರು ತಕ್ಷಣ ಶುಪಾಲರಿಗೆ ದೂರು ನೀಡಿದರು. ಕಾಲೇಜಿನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿರುವ ವೀಡಿಯೊ ಮತ್ತು ಪೋಟೊ ಆಧಾರದ ಮೇಲೆ 4 ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.