Menu

ಡಿಕೆ ಶಿವಕುಮಾರ್‌ ಮಣಿಸಲು ಪ್ರಿಯಾಂಕ್, ಸಿದ್ದರಾಮಯ್ಯ ಹೊಸ ನಾಟಕವೆಂದ ಆರ್‌. ಅಶೋಕ

R Ashoka

ಸಚಿವ ಪ್ರಿಯಾಂಕ್‌ ಖರ್ಗೆ ಅವರು ಅವರು ಮೇಲಿಂದ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಆರ್ ಎಸ್ಎಸ್ ವಿರುದ್ಧ ಪತ್ರ ಬರೆಯುತ್ತಿರುವುದು, ಪದೇ ಪದೆ ಆರೆಸ್ಸೆಸ್‌ ಬಗ್ಗೆ ನಿಂದನೀಯ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನೋಡುತ್ತಿದ್ದರೆ ಕಾಂಗ್ರೆಸ್ ಕ್ರಾಂತಿಯ ರೇಸ್ ನಲ್ಲಿ ಡಿಸಿಎಂ ಶಿವಕುಮಾರ್‌ ಅವರನ್ನು ಓವರ್ ಟೇಕ್ ಮಾಡಿ ತಾವೇ ಸಿಎಂ ಹುದ್ದೆಗೆ ಏರುವ ಕನಸು ಕಾಣುತ್ತಿರುವಂತಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅಶೋಕ, ಹೇಗಿದ್ದರೂ ಡಿಸಿಎಂ ಡಿಕೆ ವಕುಮಾರ್ ಅವರು ಸದನದಲ್ಲಿ ಸಂಘ ಗೀತೆ ಹಾಡುವ ಮೂಲಕ, ಇಶಾ ಫೌಂಡೇಶನ್ ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ, ಕುಂಭ ಮೇಳಕ್ಕೆ ಹೋಗುವ ಮೂಲಕ, ಸಂಸ್ಕೃತ ಶ್ಲೋಕಗಳನ್ನು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ಮುಜುಗರ ಉಂಟು ಮಾಡುತ್ತಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಬದ್ಧತೆ ಇಲ್ಲ ಎನ್ನುವ ಹಣೆಪಟ್ಟಿ ಕಟ್ಟಿ ಪ್ರಿಯಾಂಕ್ ಖರ್ಗೆ ಅವರೇ ಕಟ್ಟರ್ ಆರ್ ಎಸ್ಎಸ್ ವಿರೋಧಿ ಎಂದು ಬಿಂಬಿಸುವ ಮೂಲಕ ಅವರನ್ನು ಉತ್ತರಾಧಿಕಾರಿ ಮಾಡುವ ಚಾಣಾಕ್ಷ ತಂತ್ರಗಾರಿಕೆಯನ್ನು ಸಿಎಂ ಸಿದ್ದರಾಮಯ್ಯನವರು ಮಾಡಿದಂತೆ ಕಾಣುತ್ತದೆ ಎಂದು ಬರೆದುಕೊಂಡಿದ್ದಾರೆ.

ಒಂದು ಕಡೆ ಡಿಕೆಶಿವಕುಮಾರ್ ಅವರು “A symbol of loyality” ಎನ್ನುವ ಪುಸ್ತಕ ಬರೆಸಿ ತಮ್ಮ ಹೈಕಮಾಂಡ್ ನಿಷ್ಠೆಯನ್ನು ನಿರೂಪಿಸಿ ಅವರ ಆಸೆ ಈಡೇರಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೇರೆಯದೇ ನಾಟಕ ಆಡುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಕ್ರಾಂತಿಯ ಕ್ಲೈಮ್ಯಾಕ್ಸ್ ರಣರೋಚಕವಾಗಿರುವುದಂತೂ ಗ್ಯಾರಂಟಿ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಹಾಸನಾಂಬೆ ಎರಡು ಹೂ ನೀಡಿದ್ದಾಳೆ. ಆ ಹೂವನ್ನು ಪಡೆದು ಜೇಬಿನಲ್ಲಿಟ್ಟುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ದೇವಿ ವರ ಕೊಟ್ಟಿಲ್ಲ. ಈ ಹೂವಿನ ಮಹಾತ್ಮೆ ನವೆಂಬರ್‌ ಕ್ರಾಂತಿಯಲ್ಲಿ ತಿಳಿದುಬರಲಿದೆ. ಇವರಿಬ್ಬರೂ ಹಾಸನಾಂಬೆಗೆ ಪರೀಕ್ಷೆ ನೀಡಿದ್ದಾರೆ ಎಂದು ಅಶೋಕ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದ್ದರು.

 

Related Posts

Leave a Reply

Your email address will not be published. Required fields are marked *