ಉದ್ಯಮಿ ಎಲಾನ್ ಮಸ್ಕ್ ಅಮೆರಿಕದಲ್ಲಿ ಟ್ರಂಪ್ಗೆ ತಿರುಗೇಟು ನೀಡಲು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದು, ಅಮೆರಿಕ ಪಾರ್ಟಿ ಎಂಬ ಹೆಸರಿಟ್ಟಿದ್ದಾರೆ. ಮಸ್ಕ್ ಅಧಿಕೃತವಾಗಿ ಇದನ್ನು ಘೋಷಣೆ ಮಾಡಿದ್ದಾರೆ.
ಎಲಾನ್ ಮಸ್ಕ್ ಈ ಹಿಂದೆ ಕಳೆದ ವರ್ಷ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಅತ್ಯಾಪ್ತ ಬೆಂಬಲಿಗರಲ್ಲಿ ಒಬ್ಬರಾಗಿದ್ದರು. ಟ್ರಂಪ್ ಪಕ್ಷಕ್ಕೆ ಅತಿ ಹೆಚ್ಚು ದಾನ ನೀಡಿದವರಲ್ಲಿ ಒಬ್ಬರು. ಆದರೆ ಫೆಡರಲ್ ವೆಚ್ಚದಲ್ಲಿ ಕಡಿತ ಹಾಗೂ ಸರ್ಕಾರಿ ಉದ್ಯೋಗ ಕಡಿತ ಸೇರಿದಂತೆ ಹಲವು ವಿವಾದಾತ್ಮಕ ಅಂಶಗಳನ್ನು ಹೊಂದಿರುವ ಒನ್ ಬಿಗ್ ಬ್ಯೂಟಿಫುಲ್ ಮಸೂದೆ ವಿಚಾರವಾಗಿ ಈ ಇಬ್ಬರು ನಾಯಕರ ಮಧ್ಯೆ ಭಿನ್ನಾಭಿಪ್ರಾಯ ತಾರಕಕ್ಕೆ ಏರಿ ಜಾಗತಿಕ ಮಟ್ಟದಲ್ಲಿ ದೊಡ್ಡಸುದ್ದಿಯಾಗಿತ್ತು.
ಮಸ್ಕ್ ಹೊಸ ಪಕ್ಷ ಸ್ಥಾಪಿಸುವ ಮೊದಲು ಎಕ್ಸ್ನಲ್ಲಿ ಜನರ ಅಭಿಪ್ರಾಯ ಕೇಳುವುದಕ್ಕಾಗಿ ವೋಟಿಂಗ್ ಮಾಡಲು ಅವಕಾಶ ಇರುವ ಪೋಸ್ಟ್ ಹಾಕಿದ್ದರು. ಅಮೇರಿಕ ಪಕ್ಷವನ್ನು ರಚಿಸಬೇಕೇ ಎಂದು ಕೇಳಿದರು. ಸಮೀಕ್ಷೆಯಲ್ಲಿ 65.4% ಜನರು ಹೌದು ಮತ್ತು 34.6% ಜನರು ಇಲ್ಲ ಎಂದು ಮತ ಚಲಾಯಿಸಿದ್ದರು.
ದೇಶವನ್ನು ತ್ಯಾಜ್ಯ ಮತ್ತು ಭ್ರಷ್ಟಾಚಾರದಿಂದ ದಿವಾಳಿ ಮಾಡುವ ವಿಷಯ ಬಂದಾಗ, ನಾವು ಪ್ರಜಾಪ್ರಭುತ್ವದಲ್ಲಿ ಅಲ್ಲ, ಏಕಪಕ್ಷ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಎಂದು ಮಸ್ಕ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದರು. .ದೇಶದ ದ್ವಿಪಕ್ಷೀಯ ವ್ಯವಸ್ಥೆಗೆ ಸವಾಲು ಹಾಕಿ ಈ ಒನ್ ಬಿಗ್ ಬ್ಯೂಟಿಫುಲ್ ಮಸೂದೆಯನ್ನು ಬೆಂಬಲಿಸಿದ ರಾಜಕಾರಣಿಗಳನ್ನು ಸೋಲಿಸುವುದೇ ತಮ್ಮ ಗುರಿ ಎಂದು ಮಸ್ಕ್ ಘೋಷಿಸಿದ್ದಾರೆ.
ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷಕ್ಕೆ ಉತ್ತಮ ಜನಸ್ಪಂದನೆ ದೊರೆಯಲಿದೆಯೇ ಎಂಬುದು ಮುಂದಿನ ಚುನಾವಣೆ ವೇಳೆಗೆ ತಿಳಿದುಕೊಳ್ಳಬಹುದಾಗಿದೆ.