ಅಮೆರಿಕದ ಟೆಕ್ಸಾಸ್ ನಗರದಲ್ಲಿ ಏಕಾಏಕಿ ಬಿರುಗಾಳಿ, ಮಳೆ ಸುರಿದು ಗುಡಾಲುಪ್ ನದಿಯಲ್ಲಿ ದಿಢೀರ್ ಪ್ರವಾಹವುಂಟಾಗಿ ನೀರು ಟೆಕ್ಸಾಸ್ ನಗರದೊಳಕ್ಕೆ ನುಗ್ಗಿ ಒಂಬತ್ತು ಮಕ್ಕಳು ಸೇರಿದಂತೆ 27 ಜನರು ಮೃತಪಟ್ಟಿದ್ದಾರೆ.
ಜನಜೀವನ ಅಸ್ತವ್ಯಸ್ತಗೊಂಡಿದ್ದು, 20 ಮಹಿಳಾ ಶಿಬಿರಾರ್ಥಿಗಳು ಸೇರಿ ಅನೇಕರು ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡಗಳು ನಾಪತ್ತೆಯಾದ ನಿವಾಸಿಗಳ ಪತ್ತೆ ಕಾರ್ಯಾಚರಣೆ ಮುಂದುವರಿಸಿವೆ.
ಕೆರ್ ಕೌಂಟಿಯ ಬೇಸಿಗೆ ಶಿಬಿರ ಕ್ಯಾಂಪ್ ಮಿಸ್ಟಿಕ್‌ನ 24 ಬಾಲಕಿಯರು ಪ್ರವಾಹದಲ್ಲಿ ಸಿಲುಕಿದ್ದಾರೆ. ಗುಡಾಲುಪೆ ನದಿಯಲ್ಲಿ ನೀರಿನ ಮಟ್ಟ 45 ನಿಮಿಷಗಳಲ್ಲಿ 26 ಅಡಿಗಳಷ್ಟು ಏರಿಕೆಯಾಗಿ ಈ ದುರಂತ ಸಂಭವಿಸಿದೆ. ನದಿಯ ಪಕ್ಕದಲ್ಲಿದ್ದ ಕ್ಯಾಬಿನ್‌ಗಳು, ಮನೆಗಳು ಮತ್ತು ವಾಹನಗಳು ಕೊಚ್ಚಿಹೋಗಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜನರ ರಕ್ಷಣೆಗಾಗಿ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. 850ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಹೆಲಿಕಾಪ್ಟರ್‌ಗಳು, ದೋಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರವಾಹ ಬರುವ ಮೊದಲು ಹವಾಮಾನ ಇಲಾಖೆಯಿಂದಮುನ್ಸೂಚನೆಯಿರಲಿಲ್ಲ, ಅಕ್ಯುವೆದರ್ ಮತ್ತು ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆ ಬಿರುಗಾಳಿ ಬರುವ ಮುಂಚೆಯೇ ಎಚ್ಚರಿಕೆ ನೀಡಿದ್ದವು ಎನ್ನಲಾಗಿದೆ. ಆದರೆ ಬಿರುಗಾಳಿಯ ನಿಖರ ವೇಗ ಊಹಿಸಲು ಕಷ್ಟವಾಗಿತ್ತು, ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿ ಪ್ರವಾಹಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.