Thursday, October 16, 2025
Menu

ಅಕ್ಕಿ ದುರ್ಬಳಕೆ ತಡೆಗೆ ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ಸೇರಿದ ಇಂದಿರಾ ಕಿಟ್ ವಿತರಣೆ

ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿರುವ ಅಕ್ಕಿ ದುರ್ಬಳಕೆಯಾಗುತ್ತಿರುವುದನ್ನು ತಪ್ಪಿಸಲು, ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ಸೇರಿದಂತೆ ಐದಾರು ಪದಾರ್ಥಗಳಿರುವ ಇಂದಿರಾ ಕಿಟ್ ವಿತರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ  ನಡೆದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್  ಮಾತನಾಡಿದರು. ಈ ಸರ್ಕಾರ ಬರುವ ಮುನ್ನ ಅನ್ನ ಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಸುವುದಾಗಿ ಭರವಸೆ ನೀಡಿದೆವು. ನಂತರ ಇದರ ದುರ್ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಸಚಿವ ಸಂಪುಟದಲ್ಲಿ ಹೊಸ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.

“ನಾವು ಯಾರ ಒತ್ತಡಕ್ಕೂ ಒಳಗಾಗಿ ಈ ತೀರ್ಮಾನ ಮಾಡಿಲ್ಲ. ಈ ವಿಚಾರವಾಗಿ ಸಮೀಕ್ಷೆ ನಡೆಸಿ, ಜನಸಾಮಾನ್ಯರು ಹಾಗೂ ಶಾಸಕರ ಜೊತೆ ಚರ್ಚಿಸಿ ತೀರ್ಮಾನ ಮಾಡಿದ್ದೇವೆ. ಸಾಮಾನ್ಯವಾಗಿ ಪ್ರತಿ ಕುಟುಂಬದಲ್ಲಿ ತಿಂಗಳಿಗೆ ವ್ಯಕ್ತಿಗೆ 5-6 ಕೆ.ಜಿಗೆ ಅಕ್ಕಿ ಮಾತ್ರ ಬಳಸುತ್ತಾರೆ. ಹೀಗಾಗಿ ನಾವು ಕೊಟ್ಟ ಮಾತನ್ನೂ ಉಳಿಸಿಕೊಳ್ಳುವುದಕ್ಕೆ ಇಂದಿರಾ ಕಿಟ್ ವಿತರಿಸಲು ಮಾರ್ಗದರ್ಶನ ನೀಡಲಾಗಿದೆ. ನಮ್ಮ ಸರ್ಕಾರ ಸಿದ್ದರಾಮಯ್ಯ ಅವರ ನೇತೃತ್ವ ಹಾಗೂ ಸಚಿವ ಮುನಿಯಪ್ಪ ಅವರ ಮುಖಂಡತ್ವದಲ್ಲಿ ಈ ಐತಿಹಾಸಿಕ ತೀರ್ಮಾನ ಮಾಡಲಾಗಿದೆ” ಎಂದು ತಿಳಿಸಿದರು.

“ಈ ವಿಚಾರವಾಗಿ ರಾಜಕೀಯ ಚರ್ಚೆ ಮಾಡುತ್ತಾರೆ. ಯಡಿಯೂರಪ್ಪ ಅವರು ಒಂದು ಕಾಳು ಕಡಿಮೆ ಕೊಟ್ಟರು ಹೋರಾಟ ಮಾಡುವುದಾಗಿ ಹೇಳುತ್ತಿದ್ದರು. ಅವರು ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ನಮ್ಮ ಸರ್ಕಾರ ಸದಾ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಇಡೀ ದೇಶದಲ್ಲಿ ನಮ್ಮ ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ಮಾಡಿ ಅವರ ರಾಜ್ಯಗಳ ಯೋಜನೆ ನಿರ್ಣಯ ಮಾಡುತ್ತಿದ್ದಾರೆ” ಎಂದು ಹೇಳಿದರು.

“ಪ್ರತಿ ಹನಿ ನೀರಿಗೆ ಕೊಡುವ ಪ್ರಾಮುಖ್ಯತೆಯನ್ನು ಪ್ರತಿ ಅಗುಳು ಅನ್ನಕ್ಕೂ ನೀಡಬೇಕು. ನಾವೆಲ್ಲರೂ ಪ್ರಕೃತಿ ನಿಯಮದಲ್ಲಿ ಬದುಕುತ್ತಿದ್ದು, ಗಾಳಿ, ನೀರು, ಸೂರ್ಯನ ಜೊತೆಗೆ ಆಹಾರದ ಮೇಲೆ ಅವಲಂಬಿತವಾಗಿದ್ದೇವೆ. ಪ್ರಕೃತಿ ಆಹಾರದ ಮೂಲಕ ನಮ್ಮನ್ನು ಕಾಪಾಡಿಕೊಂಡು ಬಂದಿದೆ. ಹಸಿದವನಿಗೆ ಮಾತ್ರ ಆಹಾರದ ಬೆಲೆ ಗೊತ್ತಿದೆ. ಎಲ್ಲರೂ ಕಷ್ಟಪಡುವುದೂ ಒಂದು ತುತ್ತು ಆಹಾರ, ಒಂದು ಗೇಣು ಬಟ್ಟೆಗಾಗಿ. ಇದರ ಹೊರತಾಗಿ ನಾವು ಏನೇ ಮಾಡಿದರೂ ಅವು ತಾತ್ಕಾಲಿಕ ಮಾತ್ರ” ಎಂದು ಹೇಳಿದರು.

ನೆಹರೂ ಬಡವರಿಗೆ ಆಹಾರ ವಿತರಣೆ ಕಾರ್ಯಕ್ರಮ ರೂಪಿಸಿದರು. ಇಂದಿರಾ ಗಾಂಧಿ ಹಾಗೂ ದೇವರಾಜ ಅರಸು ಕಾಲದಲ್ಲಿ ಉಳುವವನಿಗೆ ಭೂಮಿ ಕೊಡಲಾಯಿತು. ಬಡವರಿಗೆ ಪಡಿತರ  ಚೀಟಿ ವ್ಯವಸ್ಥೆ ಮಾಡಲಾಯಿತು. ಎಸ್.ಎಂ ಕೃಷ್ಣ ಕಾಲದಲ್ಲಿ ಶಾಲೆಗಳಲ್ಲಿ  ಮಧ್ಯಾಹ್ನ ಬಿಸಿಯೂಟ ಯೋಜನೆ ಆರಂಭಿಸಲಾಯಿತು. ಸಿದ್ದರಾಮಯ್ಯ  ಅಧಿಕಾರ ಸ್ವೀಕರಿಸಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ನಮ್ಮ ಈ ಕಾರ್ಯಕ್ರಮಗಳನ್ನು ಯಾವುದೇ ಸರ್ಕಾರಗಳು ನಿಲ್ಲಿಸಲು ಸಾಧ್ಯವಾಗಿಲ್ಲ. ಮನಮೋಹನ್ ಸಿಂಗ್   ದೇಶದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದರು ಎಂದು ಸ್ಮರಿಸಿದರು.

“ಈ ಹಿಂದೆ ಉಚಿತ ಗ್ಯಾಸ್ ನೀಡುವ ಯೋಜನೆಗೆ ಮೋದಿ ಫೋಟೋ ಹಾಕಿ ಎಲ್ಲಾ ಪೆಟ್ರೋಲ್ ಬಂಕ್ ಗಳ ಮುಂದೆ ಹಾಕುತ್ತಿದ್ದರು. ಈಗ ಅದನ್ನು ನಿಲ್ಲಿಸಿದ್ದಾರೆ. 400 ರೂಪಾಯಿ ಇದ್ದ ಅಡುಗೆ ಅನಿಲ 1100ಕ್ಕೆ ಏರಿಕೆಯಾಗಿತ್ತು. ಎಲ್ಲದರ ಬೆಲೆಗಳು ಗಗನಕ್ಕೇರಿದೆ, ಆದಾಯ ಪಾತಾಳಕ್ಕೆ ಕುಸಿದಿದೆ ಎಂದು ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ಇದಕ್ಕೆ ಪ್ರತಿ ವರ್ಷ 53 ಸಾವಿರ ಕೋಟಿ ಅನುದಾನ ನೀಡುತ್ತಿದ್ದೇವೆ. ಪ್ರಧಾನಮಂತ್ರಿಗಳು ಹಾಗೂ ಇತರೆ ನಾಯಕರು ನಮ್ಮ ಯೋಜನೆ ಟೀಕೆ ಮಾಡಿದರೂ ಕೊನೆಗೆ ತಮ್ಮ ರಾಜಕೀಯ ಸ್ಥಾನಮಾನ ಉಳಿಸಿಕೊಳ್ಳಲು ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ. ಬಿಹಾರದಲ್ಲಿ ಚುನಾವಣೆಯೇ ಘೋಷಣೆಯೇ ಆಗದಿದ್ದ ವೇಳೆಯಲ್ಲೇ ಆ ರಾಜ್ಯದ ಮಹಿಳೆಯರ ಖಾತೆಗೆ 10 ಸಾವಿರ ಹಾಕುತ್ತಿದ್ದಾರೆ. ಇಲ್ಲಿ ಜನರ ಹೊಟ್ಟೆಪಾಡು ವಿಚಾರ ಬಹಳ ಮುಖ್ಯ ಎಂದು ಸಾಬೀತಾಗುತ್ತದೆ” ಎಂದರು.

“ಏಷ್ಯಾ ಹಾಗೂ ನಮ್ಮ ದೇಶಗಳಲ್ಲಿ ಮಾತ್ರ ಬಿಸಿ ಬಿಸಿ ಆಹಾರ ತಿನ್ನುತ್ತೇವೆ. ಉಳಿದಂತೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜಂಕ್ ಆಹಾರ, ಬ್ರೆಡ್, ಫಾಸ್ಟ್ ಫುಡ್ ಸೇವನೆ ಮಾಡುತ್ತಾರೆ. ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ, ವಿದೇಶಗಳಿಗೆ ರಫ್ತು ಮಾಡುವ ಶಕ್ತಿ ಪಡೆದಿದ್ದೇವೆ. ಗುಜರಾತಿಗಿಂತ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರದ ಯೋಜನೆಗಳು ಜನಪರ ಕಾರ್ಯಕ್ರಮವಾಗಿದ್ದು, ದೇಶಕ್ಕೆ ಮಾದರಿಯಾಗಿವೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *