ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ಶನಿವಾರ ರಾತ್ರಿ ಅಲಾಯಿ ಕುಣಿಗೆ ಬಿದ್ದು ವ್ಯಕ್ತಿಯೊಬ್ಬ ಸುಟ್ಟು ಗಂಭೀರ ಗಾಯಗೊಂಡಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಗಾಯಾಳುವನ್ನು ಹನುಮಂತ ಯಮನೂರಪ್ಪ ಪೋಲಿಸ್ ಪಾಟೀಲ್ (40) ಎಂದು ಗುರುತಿಸಲಾಗಿದೆ.
ಮೊಹರಂ ಹಬ್ಬದ ಕಫಲ್ ರಾತ್ರಿ ಆಚರಣೆಗೆ ಗ್ರಾಮದ ಹಸೇನ್ ಹುಸೇನ್ ಆಲಂಗಳ ದರ್ಗಾದ ಮುಂದೆ ಅಲಾಯಿ ಕುಣಿಯಲ್ಲಿ ಕೆಂಡ ಹಾಯಲು ಕಟ್ಟಿಗೆ ದಿನ್ನೆಗಳನ್ನು ಹಾಕಿ ಬೆಂಕಿ ಹಚ್ಚಲಾಗಿತ್ತು. ಕುಡಿದ ಅಮಲಿನಲ್ಲಿದ್ದ ಹನುಮಂತ ಕುಣಿಗೆ ಇಳಿದಿದ್ದು, ಸುತ್ತ ನೆರೆದಿದ್ದ ಜನ ಆತನನ್ನು ಬಚಾವು ಮಾಡಲು ಹರಸಾಹಸ ಪಟ್ಟಿದ್ದಾರೆ.
ಬೆಂಕಿಯಿಂದ ಮೇಲೆತ್ತುವದರೊಳಗೆ ತೀವ್ರವಾಗಿ ಸುಟ್ಟು ಗಾಯಗೊಂಡಿದ್ದ ಹನುಮಂತನನ್ನು ಆಸತ್ರೆಗೆ ಸಾಗಿಸಲಾಗಿದೆ. ಲಿಂಗಸುಗೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ರಾಯಚೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದೇಹ ಶೇ.90ರಷ್ಟು ಸುಟ್ಟಿದ್ದು ಬದುಕುಳಿಯುವ ಸಾಧ್ಯತೆ ತೀವ್ರ ಕಡಿಮೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.