ವಿಜಯನಗರ ಮರಿಯಮ್ಮನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಕೆಪಿಟಿಸಿಎಲ್ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದ ಭೀಕರ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಮೂವರು ಮಕ್ಕಳು ತೀವ್ರ ಗಾಯಗೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಚೆಟ್ನಿಹಾಳು ಗ್ರಾಮದ ಮೂಲದವರಾದ ಮುತ್ತಪ್ಪ ಪೂಜಾರ್ (35) ಹಾಗೂ ಪತ್ನಿ ರೇಣುಕಾ (30) ಮೃತಪಟ್ಟವರು. ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮುತ್ತಪ್ಪ ಮೊಹರಂ ಹಬ್ಬದ ನಿಮಿತ್ತ ಕುಟುಂಬದೊಂದಿಗೆ ಸ್ವಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅನುಶ್ರೀ (9), ರೂಪಶ್ರೀ (6), ಖುಷಿ (4) ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಗೆ ಕಳಿಸಲಾಗಿದೆ. ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ಅರ್ಧ ಕಿಲೋಮೀಟರ್ ದೂರದವರೆಗೂ ಎಳೆದೊಯ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶ್ರೀಹರಿಬಾಬು ಬಿ.ಎಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಿಯಮ್ಮನಹಳ್ಳಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.