ಬೆಂಗಳೂರು ನಿವಾಸಿಗಳಿಗೆ ಅದರಲ್ಲೂ ಬಡವರು ಮತ್ತು ಮಧ್ಯಮವರ್ಗದವರಿಗೆ ಸರ್ಕಾರ ಶುಭ ಸುದ್ದಿ ಪ್ರಕಟಿಸಿದೆ. 1,200 ಚದರ ಅಡಿವರೆಗಿನ ನಿವೇಶನ, 3 ಅಂತಸ್ತು ಕಟ್ಟಡಕ್ಕೆ OC ವಿನಾಯಿತಿ ನೀಡುವುದಾಗಿ
ನಗರಾಭಿವೃದ್ಧಿ ಇಲಾಖೆಯಿಂದ ಅಧಿಕೃತ ಆದೇಶ ಪ್ರಕಟವಾಗಿದೆ.
ಜಿಬಿಎ ಆಡಳಿತ ಕಾಯ್ದೆ–2024ರ ಕಲಂ 241(7)ರಂತೆ ಸರ್ಕಾರ ಆದೇಶಿಸಿದೆ. ವಸತಿ ಕಟ್ಟಡಗಳಿಗೆ ಮಾತ್ರ ಒಸಿಯಿಂದ ವಿನಾಯಿತಿ ನೀಡಿದ್ದು, 1,200 ಚದರಡಿ ವಿಸ್ತೀರ್ಣ ಮೀರದಂತಹ ನಿವೇಶನಗಳಿಗೆ ಮತ್ತು
ನೆಲ ಮತ್ತು 2 ಅಂತಸ್ತು ಅಥವಾ ಸ್ಟಿಲ್ಟ್ ಮತ್ತು 3 ಅಂತಸ್ತಿನ ಕಟ್ಟಡಗಳಿಗೆ ಅನ್ವಯಿಸುತ್ತದೆ.
ಬೆಂಗಳೂರು ಒಂದರಲ್ಲೇ ಲಕ್ಷಾಂತರ ಕಟ್ಟಡಗಳಿಗೆ OC ಇದೂವರೆಗೂ ಸಿಕ್ಕಿರಲಿಲ್ಲ, ಹೀಗಾಗಿ ನೀರು, ವಿದ್ಯುತ್ ಸಂಪರ್ಕವೂ ನೀಡದಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. OC ಇದ್ದ ಕಟ್ಟಡಗಳಿಗೆ ಮಾತ್ರ ನೀರು, ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು, OC ಇಲ್ಲದಿರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿರಲಿಲ್ಲ.
ಸ್ವಾಧೀನ ಪತ್ರಕ್ಕೆ ವಿನಾಯಿತಿ ನೀಡಿದ್ದು ಇಂಥ ಕಟ್ಟಡಗಳಿಗೆ ಅನುಕೂಲವಾಗಿದೆ. ಕಟ್ಟಡಗಳಿಗೆ ಸ್ವಾಧೀನ ಪತ್ರವನ್ನು ಸ್ಥಳೀಯ ಸಂಸ್ಥೆಗಳು ನೀಡುತ್ತವೆ, ಅದು ಸ್ಥಳೀಯ ಸಂಸ್ಥೆಗಳು ನೀಡುವ ಕಾನೂನುಬದ್ಧ ದಾಖಲೆ. ಅನಧಿಕೃತ ಕಟ್ಟಡ, ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ OC ನೀಡುವುದಿಲ್ಲ. OC ಇಲ್ಲದಿದ್ದರೆ ವಿದ್ಯುತ್ ಮತ್ತು ನೀರು, ಒಳಚರಂಡಿ ಸಂಪರ್ಕ ಸಿಗುತ್ತಿರಲಿಲ್ಲ.
ಈ ಕ್ರಮದಿಂದ ಸಣ್ಣ ನಿವೇಶನದ ಮನೆ ಮಾಲೀಕರಿಗೆ, ಅನುಮತಿ ಇಲ್ಲದೆ ಮನೆ ನಿರ್ಮಿಸಿದ್ದ ಮಾಲೀಕರಿಗೆ, ಮನೆ ಮಾರಾಟ ಅಥವಾ ಬ್ಯಾಂಕ್ ಸಾಲಕ್ಕೂ ಅನುಕೂಲವಾಗುವುದು. ಅನಧಿಕೃತ ಕಟ್ಟಡಗಳು ಅಧಿಕೃತವಾಗುತ್ತವೆ, ನೆಲ + 2 ಅಂತಸ್ತುಗಳು ಸ್ಟಿಲ್ಟ್ + 3 ಅಂತಸ್ತುಗಳು ಇರುವ ಕಟ್ಟಡಗಳಿಗೆ ಮಾತ್ರ ಅನ್ವಯಿಸುತ್ತದೆ. ಮನೆ ಖರೀದಿಸಲು ಬಯಸುವವರಿಗೂ ಸಹಾಯವಾಗಲಿದೆ. OC ಇಲ್ಲದೆ ನಿರ್ಮಿಸಲಾದ ಅನೇಕ ಸಣ್ಣ ಮನೆಗಳು ಕಾನೂನು ಬದ್ಧವಾಗಬಹುದು.
ಇದರಿಂದ ನಿಯಮ ಉಲ್ಲಂಘನೆಯಾಗುವ ಸಾಧ್ಯತೆ, ಚಿಕ್ಕ ನಿವೇಶನಗಳ ಮೇಲೆ ಹೆಚ್ಚು ಅಂತಸ್ತು ಕಟ್ಟಡಗಳ ನಿರ್ಮಾಣ, ಗುಣಮಟ್ಟ ಇಲ್ಲದ ಕಟ್ಟಡಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.