ತೆರಿಗೆ ಸಂಗ್ರಹ ಮತ್ತು ಸಂಗ್ರಹವಾದ ತೆರಿಗೆಯನ್ನು ವಿನಿಯೋಗಿಸುವ ವಿಧಾನ ಎರಡೂ ಕೂಡ ಜನಪರವಾಗಿರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಲೆಲ್ಲ ನಿರಂತರವಾಗಿ ಜನಪರವಾದ ಯೋಜನೆಗಳನ್ನು, ಅಭಿವೃದ್ಧಿ ಮಾದರಿಗಳನ್ನು, ಕಲ್ಯಾಣ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ, ಅವುಗಳಲ್ಲಿ ಭೂ ಮತ್ತು ಕಂದಾಯ ಜನಪರ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ,
ಇ–ಖಾತಾ ವಿಶಿಷ್ಟ ಮಾದರಿ ಅಭಿಯಾನ
ರಾಜ್ಯದ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಮುಖ್ಯವಾಗಿ ಕಂದಾಯ, ಭೂಮಿ ಮತ್ತು ಯೋಜನಾ ಪ್ರಾಧಿಕಾರಗಳಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಇ-ಖಾತಾ ನೀಡದೆ ಜನರಿಗೆ ತೊಂದರೆಯಾಗುತ್ತಿರುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಫೆಬ್ರವರಿ 2025ರಂದು ಅನಧಿಕೃತ ಕಟ್ಟಡ, ನಿವೇಶನಗಳಿಗೆ ಇ-ಖಾತಾ ನೀಡಲು ಅನುವಾಗುವಂತೆ ಕರ್ನಾಟಕ ಮುನಿಸಿಪಲ್ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತಂದಿದೆ.
ಇದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ 34 ಲಕ್ಷ ಆಸ್ತಿಗಳು ಹಾಗೂ ಬಿಬಿಎಂಪಿ ಪ್ರದೇಶದಲ್ಲಿ ಸುಮಾರು 25 ಲಕ್ಷ ಆಸ್ತಿಗಳು ಸೇರಿ ಒಟ್ಟಾರೆ 59ಲಕ್ಷ ಆಸ್ತಿಗಳಿಗೆ ಇ-ಖಾತಾ ಸೌಲಭ್ಯ ಇರಲಿಲ್ಲ. ಇದನ್ನು ಮನಗಂಡ ನಮ್ಮ ಸರ್ಕಾರವು ಅನಧಿಕೃತ ಆಸ್ತಿಗಳಿಗೆ ಇ-ಖಾತಾ ನೀಡಲು ತೀರ್ಮಾನಿಸಿತು. ಈವರೆಗೆ ಸುಮಾರು 8 ಲಕ್ಷ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ. ಈಗ ತಂತ್ರಾಂಶದಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ (First in First out) ಅನುಸಾರ ಕ್ರಮ ವಹಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲೂ ಸಹ ಬಾಕಿ ಇರುವ ಅನಧಿಕೃತ ಆಸ್ತಿಗಳಿಗೆ ಇ-ಖಾತಾ ಸೌಲಭ್ಯ ನೀಡಲಾಗುವುದು. ರಾಜ್ಯದಲ್ಲಿ 1.00 ಕೋಟಿಗೂ ಹೆಚ್ಚಿನ ಆಸ್ತಿಗಳಿಗೆ ಇ-ಖಾತಾ ಸೌಲಭ್ಯ ದೊರೆಯಲಿದೆ.
“ನನ್ನ ಭೂಮಿ” ತಂತ್ರಾಂಶ: ರಾಜ್ಯದ ಮಂಜೂರಿ ಜಮೀನುಗಳಿಗೆ ಸಂಬಂಧಿಸಿದ ವಿವರವಾದ ಮಾಹಿತಿಯು ಶೀಘ್ರವಾಗಿ ದೊರಕುವಂತೆ ಮಾಡಲು ದಾಖಲೆಗಳನ್ನು ಡಿಜಿಟಲೀಕರಣ ಮಾಡಲು “ನನ್ನ ಭೂಮಿ” ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ದರಖಾಸ್ತು ಪೋಡಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ರೈತರಿಂದ ಯಾವುದೇ ಅರ್ಜಿ ಸ್ವೀಕರಿಸದೆ ಒಂದು ಸರ್ವೆ ನಂಬರ್ನ ಎಲ್ಲಾ ರೈತರಿಗೂ ಪೋಡಿ ಪ್ರಕ್ರಿಯೆ ಮಾಡಲಾಗುತ್ತಿದೆ. ಈವರೆಗೆ 91,000 ರೈತರ ಜಮೀನುಗಳಿಗೆ ಪೋಡಿ ಮಾಡಲು ತಹಶೀಲ್ದಾರ್ ಅನುಮೋದನೆ ನೀಡಿದ್ದು, 30,000 ಜಮೀನುಗಳಿಗೆ ಪಹಣಿ ಕೊಡುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.
ದಾಖಲೆರಹಿತ ಜನವಸತಿಗಳಾದ ತಾಂಡ, ಹಟ್ಟಿ, ಹಾಡಿ, ದೊಡ್ಡಿ, ಪಾಳ್ಯ, ಮಜರೆ, ಕ್ಯಾಂಪ್, ಕಾಲೋನಿ ಇತ್ಯಾದಿಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಸರ್ಕಾರಿ ಸೌಲಭ್ಯ ಪಡೆಯಲು ಅನುವಾಗುವಂತೆ ಇಂತಹ ಗ್ರಾಮಗಳನ್ನು “ಕಂದಾಯ ಗ್ರಾಮಗಳಾಗಿ” ಘೋಷಿಸಲಾಗುತ್ತಿದೆ. 2017 ರಲ್ಲಿ ಈ ಯೋಜನೆಯನ್ನು ನಮ್ಮ ಸರ್ಕಾರ ಪ್ರಾರಂಭಿಸಿತ್ತು. ಈ ಯೋಜನೆಯನ್ನು ಪ್ರಾರಂಭಿಸಿದ್ದರಿಂದ 6-7 ಲಕ್ಷ ಕುಟುಂಬಗಳಿಗೆ ಅನುಕೂಲವಾಗುತ್ತಿದೆ.
ಖಾಸಗಿ ಜಮೀನುಗಳಲ್ಲಿ, ಸರ್ಕಾರಿ, ಅರಣ್ಯ ಜಮೀನುಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳಿಗೆ ಬಹುದೊಡ್ಡ ಅನುಕೂಲವಾಗುತ್ತಿದೆ. ಈಗ ತಂತ್ರಜ್ಞಾನದ ನೆರವು ಪಡೆದು ಪ್ರಕ್ರಿಯೆಯನ್ನು ಸರಳ ಮತ್ತು ವೇಗಗೊಳಿಸಲಾಗಿದೆ. ಈಗ ಹೊಸಪೇಟೆಯಲ್ಲಿ 1 ಲಕ್ಷ ಜನರಿಗೆ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಮುದ್ರಾಂಕ ಇಲಾಖೆಯ ತಂತ್ರಾಂಶವನ್ನು ಸಂಯೋಜಿಸಿ ಹಕ್ಕು ಪತ್ರ ನೋಂದಾಯಿಸಿ ಇ–ಸ್ವತ್ತು (ಇ–ಖಾತಾ) ದಾಖಲಾತಿಯೊಂದಿಗೆ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಇದರಿಂದ 1 ಕೋಟಿಗೂ ಹೆಚ್ಚಿನ ಆಸ್ತಿಗಳಿಗೆ ಅನುಕೂಲವಾಗಲಿದೆ.
ಸರ್ಕಾರಿ ಭೂಮಿ ಒತ್ತುವರಿ ತಡೆಯಲು “ಲ್ಯಾಂಡ್ ಬೀಟ್” ಎಂಬ ಕ್ರಾಂತಿಕಾರಿ ಉಪಕ್ರಮದ ಮೂಲಕ ಸರ್ಕಾರಿ ಭೂಮಿಗೆ ಜಿಯೋ–ಟ್ಯಾಗ್ & ಜಿಯೋ–ಫೆನ್ಸಿಂಗ್ ಆಧಾರಿತ ಡಿಜಿಟಲ್ ಭದ್ರತೆ ಒದಗಿಸಲಾಗಿದೆ. 14.2 ಲಕ್ಷ ಜಮೀನುಗಳ ಪೈಕಿ ಶೇ. 97ರಷ್ಟು ಜಮೀನುಗಳನ್ನು ಪರಿಶೀಲಿಸಲಾಗಿದೆ. ಉತ್ತರಾಧಿಕಾರದ ದಾಖಲೆಗಳಿಲ್ಲದೆ ಸಾಗುವಳಿ ಮಾಡುತ್ತಿರುವ ರಾಜ್ಯದ ಸಾವಿರಾರು ಕುಟುಂಬಗಳ ಹಕ್ಕುಗಳನ್ನು ಮನ್ನಣೆ ಮಾಡುವ ಮತ್ತು ಸಕ್ರಮ ಮಾಲೀಕತ್ವವನ್ನು ಖಚಿತಪಡಿಸುವ ಉದ್ದೇಶದಿಂದ ರಾಜ್ಯಾದ್ಯಂತ “ಇ–ಪೌತಿ ಯೋಜನೆ” ಜಾರಿಗೆ ತರಲಾಗಿದೆ.
ಡಿಜಿಟಲೀಕರಣ ಮತ್ತು ಸ್ವಯಂಚಾಲನೆಯಿಂದ ಸ್ವಯಂಚಾಲಿತ ಮ್ಯುಟೇಶನ್ನಿಂದ ಜಮೀನುಗಳ ಮ್ಯುಟೇಶನ್ ಪ್ರಕ್ರಿಯೆಯನ್ನು ತ್ವರಿತ ಮತ್ತು ಪರಿಣಾಮಕಾರಿಗೊಳಿಸಲಾಗಿದೆ. ಸ್ವಯಂಚಾಲಿತ ಮ್ಯುಟೇಶನ್ಗೆ ಒಳಪಡುವ ಪ್ರಕಾರಗಳೆಂದರೆ, ಹಕ್ಕು ಮತ್ತು ಋಣ, ಭೂ ಸ್ವಾಧೀನ, ಭೂ ಪರಿವರ್ತನೆ, ನ್ಯಾಯಾಲಯ ಆದೇಶ, ನ್ಯಾಯಾಲಯ ತಡೆ, ಫೋಡಿ, ಆರ್ಟಿಸಿ ಚಲನೆ, ಸಾಗುವಳಿ ದಾರರ ತಿದ್ದುಪಡಿ ಮತ್ತು ಸರ್ಕಾರಿ ಆದೇಶ ಮಂಜೂರಿ ಪ್ರಕರಣಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ರಾಜ್ಯದಲ್ಲಿ ವಿಲೇವಾರಿಯಾಗುವ ಒಟ್ಟು ಮ್ಯುಟೇಷನ್ಗಳಲ್ಲಿ ಶೇಕಡಾ 67 ರಷ್ಟು ಮುಟೇಷನ್ಗಳನ್ನು ಆಟೋ-ಮ್ಯುಟೇಷನ್ ವ್ಯಾಪ್ತಿಯಡಿ ತರಲಾಗಿದೆ. ಏಪ್ರಿಲ್-2024 ರಿಂದ ಈವರೆಗೆ 19 ಲಕ್ಷಕ್ಕೂ ಹೆಚ್ಚು ಮುಟೇಷನ್ ವಿಲೇವಾರಿ ಮಾಡಲಾಗಿದೆ.
“ಇ–ಚಾವಡಿ” ಕಂದಾಯ ಇಲಾಖೆಯ ಎಲ್ಲಾ ಮಾಹಿತಿಯನ್ನು ಡಿಜಿಟಲ್ ಡ್ಯಾಶ್ ಬೋರ್ಡ್ ಮೂಲಕ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಇ-ಚಾವಡಿಯಲ್ಲಿ ಮ್ಯುಟೇಶನ್ ಸಮಯದಲ್ಲಿ ನಮೂನೆ 12 ಮತ್ತು 21 ಅನ್ನು ಪ್ರಚುರಪಡಿಸಲಾಗುತ್ತಿದೆ ಹಾಗೂ ಭೂಪರಿವರ್ತನೆ ಸರ್ಕಾರಿ ಜಮೀನುಗಳು ಹಾಗೂ ಕೋರ್ಟ್ ಪ್ರಕರಣಗಳ ಗ್ರಾಮವಾರು ಮಾಹಿತಿ ಸಹ ಲಭ್ಯವಿದೆ. ಗ್ರಾಮ ಆಡಳಿತ ಅಧಿಕಾರಿಗಳಿಗೆ 4,000 ಕ್ಕೂ ಹೆಚ್ಚು ಕ್ರೋಮ್ ಬುಕ್ ಲ್ಯಾಪ್ಟಾಪ್ಗಳನ್ನು ವಿತರಿಸಲಾಗಿದೆ. ಇದರಿಂದ ಭೂ ದಾಖಲೆಗಳ ಸೇವೆಗಳು ಸಕಾಲದಲ್ಲಿ ಜನರಿಗೆ ಲಭ್ಯವಾಗಲಿವೆ.
“ನಕ್ಷಾ” ಯೋಜನೆಯಡಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿಗಳನ್ನು ಡ್ರೋಣ್ / ವೈಮಾನಿಕ ಸರ್ವೆ ಕೈಗೊಂಡು ಡಿಜಿಟಲ್ ಮಾಧ್ಯಮದಲ್ಲಿ ಆಸ್ತಿ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಆಕಾರ್ ಬಂದ್ ಮತ್ತು ಆರ್.ಟಿ.ಸಿ. ಯಲ್ಲಿನ ವಿಸ್ತೀರ್ಣವನ್ನು ಹೊಂದಾಣಿಕೆ ಮಾಡುವ ಉದ್ದೇಶದಿಂದ ಆಕಾರ ಬಂದ್ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಭೂಮಾಪನ ಕಾರ್ಯ ಕೈಗೊಳ್ಳಲು ಹಾಗೂ ನಿಖರವಾದ ಡಿಜಿಟಲ್ ದಾಖಲೆಗಳನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ಸಕಾಲದಲ್ಲಿ ಒದಗಿಸಲು ಸಾಂಪ್ರದಾಯಿಕ ಸರ್ವೆ ಉಪಕರಣಗಳ ಬದಲಿಗೆ 5000 ರೋವರ್ಗಳನ್ನು ಬಳಸಲಾಗುತ್ತಿದೆ.
ಮೋಜಣಿ 3.0 ತಂತ್ರಾಂಶದ ವ್ಯವಸ್ಥೆ ಮೂಲಕ 26 ಲಕ್ಷ ರೈತರ ಭೂ ಅಳತೆ ಕಾರ್ಯ ಹಾಗೂ ನಕ್ಕೆ ತ್ವರಿತವಾಗಿ ಅರ್ಜಿ ನೀಡಿದ 30 ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಸರ್ವೆ ಇಲಾಖೆಯಲ್ಲಿ 2.43 ಕೋಟಿ ಆಕಾರ್ ಬಂದ್ ಮತ್ತು 1.34 ಕೋಟಿ ಹಿಸ್ಸಾ ಸ್ಕೆಚ್ ಗಳನ್ನು ಗಣಕೀಕರಣ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ 1000 ಗ್ರಾಮ ಆಡಳಿತ ಅಧಿಕಾರಿಗಳನ್ನು ಪಾರದರ್ಶಕವಾಗಿ ನೇಮಕ ಮಾಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಂಜೂರಾದ ಜಮೀನನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೇ ಮಾರಾಟ ಮಾಡಿರುವ ಪ್ರಕರಣಗಳಲ್ಲಿ ಪುನರ್ ಸ್ಥಾಪನೆ ಕೋರಿ ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ಇರುವುದಿಲ್ಲವೆಂದು ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) ಅಧಿನಿಯಮ, 1978 ಗೆ ತಿದ್ದುಪಡಿ ತರಲಾಗಿದೆ.
“ಭೂ–ಸುರಕ್ಷಾ” (ಭೂದಾಖಲೆಗಳ ಅಧುನೀಕರಣ) ಯೋಜನೆಯ ಮೂಲಕ ರಾಜ್ಯದ ಎಲ್ಲಾ ಕಂದಾಯ ಕಚೇರಿಗಳ ದಾಖಲೆಗಳನ್ನು ಗಣಕೀಕರಣ ಮಾಡಲಾಗುತ್ತಿದೆ. ಧಾರ್ಮಿಕ ಯಾತ್ರೆಗೆ ತೆರಳುವ ರಾಜ್ಯದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವೆಬ್ ಸೈಟ್ ಪೋರ್ಟಲ್ (https://karnatakayatras.com) ಮತ್ತು ಮೊಬೈಲ್ ಆಪ್ (Karnataka Yatras) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜಮೀನು ಪೋಡಿಗೆ ಅಗತ್ಯವಿದ್ದ ಕನಿಷ್ಠ 5 ದಾಖಲೆಗಳನ್ನು 3 ಕ್ಕೆ ಇಳಿಸಿ, ದಶಕಗಳಿಂದ ಬಾಕಿ ಇದ್ದ ರೈತರ ಜಮೀನಿನ ದುರಸ್ತಿ ಕಾರ್ಯ ಸುಗಮಗೊಳಿಸಲು “ಸರಳೀಕೃತ ದರಖಾಸ್ತು ಪೋಡಿ ಆಂದೋಲನ” ನಡೆಸಲಾಗಿದೆ.
2015-16 ನೇ ಸಾಲಿನಲ್ಲಿ ಪ್ರಾರಂಭಿಸಲಾಗಿದ್ದ ಬಹು ಮಾಲೀಕತ್ವವುಳ್ಳ ಪಹಣಿಗಳನ್ನು ಅಳತೆಗೆ ಒಳಪಡಿಸುವ ಮೂಲಕ ಏಕ ಮಾಲೀಕತ್ವದ ಆರ್.ಟಿ.ಸಿ.ಯನ್ನು ವಿತರಿಸುವ ‘ಪೋಡಿ ಮುಕ್ತ ಅಭಿಯಾನ’ಕ್ಕೆ ಮರುಚಾಲನೆ ನೀಡಲಾಗಿದೆ. ಈ ಅಭಿಯಾನದಡಿ ಮೋಜಿಣಿ ತಂತ್ರಾಂಶದ ಮೂಲಕ 7749 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು 2204 ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಲಾಗಿದೆ.
ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧುನಿಕ ತಂತ್ರಜ್ಞಾನ ಆಧಾರಿತ ಡ್ರೋಣ್ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಡ್ರೋಣ್ ಸರ್ವೆ 21 ಜಿಲ್ಲೆಗಳಲ್ಲಿ ಪ್ರಗತಿಯಲ್ಲಿದ್ದು, 1,17,187 ಚದರ ಕಿ.ಮೀ ಪ್ರದೇಶದಲ್ಲಿ ಸರ್ವೆ ಕಾರ್ಯ ಪ್ರಗತಿಯಲ್ಲಿರುತ್ತದೆ. ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು ಉಯ್ಯಂಬಳ್ಳಿ ಹೋಬಳಿಯ ಎಲ್ಲಾ 33 ಗ್ರಾಮಗಳಲ್ಲಿ ಡ್ರೋಣ್ ಮರು ಭೂಮಾಪನದಡಿ 23 ಸಾವಿರ ಡ್ರೋಣ್ ಆಧಾರಿತ ಆರ್.ಟಿ.ಸಿ ವಿತರಿಸಲಾಗಿದೆ. ರಾಜ್ಯದಲ್ಲಿನ ಸುಮಾರು 30,700 ಗ್ರಾಮ ಠಾಣಾ ಪ್ರದೇಶಗಳನ್ನು ಹಂತ ಹಂತವಾಗಿ ಡ್ರೋಣ್ ಮುಖಾಂತರ ಸರ್ವೆ ಮಾಡಿಸಿ ಆಸ್ತಿ ಮತ್ತು ಹಕ್ಕು ದಾಖಲಾತಿಗಳನ್ನು ಭೂ ಮಾಲೀಕರಿಗೆ ವಿತರಿಸುವ ಸ್ವಮಿತ್ವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. 3954 ಗಾಮಗಳಲ್ಲಿ ಒಟ್ಟು 10.14 ಲಕ್ಷ ಕರಡು ಸ್ವಮಿತ್ವ ಕಾರ್ಡ ವಿತರಣೆ ಮಾಡಲಾಗಿದೆ. 19,672 ಡ್ರೋಣ್ ಹಾರಾಟ ಪೂರ್ಣಗೊಂಡಿದ್ದು, ಪ್ರಥಮ ಬಾರಿಗೆ ಗ್ರಾಮ ಠಾಣಾ ನಕ್ಷೆ ಸಿದ್ಧಪಡಿಸಿ ಪ್ರಚುರ ಪಡಿಸಲಾಗುತ್ತಿದೆ.
ಪರಿಹಾರ 2.0 ತಂತ್ರಾಂಶದೊಂದಿಗೆ ಬೆಳೆ ಹಾನಿ ದತ್ತಾಂಶ ಜೋಡಣೆ ಮಾಡಲಾಗಿದ್ದು, ಯಾವುದೇ ಮಧ್ಯವರ್ತಿಗಳಿಲ್ಲದೆ, ನಿಜವಾದ ಸಂತ್ರಸ್ತರಿಗೆ ಬೆಳೆ ಹಾನಿ ಪರಿಹಾರವನ್ನು ನೇರವಾಗಿ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ 38 ಲಕ್ಷ ರೈತರಿಗೆ 3700 ಕೋಟಿ ಪರಿಹಾರ ಮೊತ್ತ ವಿತರಿಸಲಾಗಿದೆ.
ಆರ್ಸಿಸಿಎಂಎಸ್ 2.0 (ಕಂದಾಯ ನ್ಯಾಯಾಲಯ ಪ್ರಕರಣ ಮೇಲ್ವಿಚಾರಣಾ ವ್ಯವಸ್ಥೆ) ನ್ಯಾಯದೀಕ್ಷೆ ತಂತ್ರಾಂಶವನ್ನು ಡಿಜಿಟಲೈಸ್ ಮಾಡಲಾಗಿದ್ದು, ಸಂಪೂರ್ಣವಾಗಿ ಕಾಗದರಹಿತ ಮಾಡಲಾಗಿದೆ. ಸದರಿ ತಂತ್ರಾಂಶದಲ್ಲಿ ಡಿಜಿಟಲ್ ಆದೇಶವನ್ನು ಡಿಜಿಟಲ್ ಸಹಿಯೊಂದಿಗೆ ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಒಟ್ಟು 1.9 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ತಹಶೀಲ್ದಾರ್ ನ್ಯಾಯಾಲಯದಲ್ಲಿ ಅವಧಿ ಮೀರಿದ ಪ್ರಕರಣಗಳನ್ನು (90 ದಿನಗಳು) 10,700 ರಿಂದ 400 ಕ್ಕೆ ಹಾಗೂ ವಿಲೇವಾರಿ ಅವಧಿಯನ್ನು 212 ರಿಂದ 67 ದಿನಗಳಿಗೆ ಇಳಿಸಲಾಗಿದೆ. ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಬಾಕಿ ಪ್ರಕರಣಗಳನ್ನು 70000 ದಿಂದ 30000 ಕ್ಕೆ ಇಳಿಸಲಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ಕಳೆದ ಎರಡು ವರ್ಷಗಳಲ್ಲಿ ಹಲವಾರು ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾವೇರಿ 2.0 ತಂತ್ರಾಂಶವನ್ನು ಅಳವಡಿಸಿಕೊಳ್ಳುವ ಮೂಲಕ ನೋಂದಣಿ ವ್ಯವಸ್ಥೆಗೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ, ಮನೆಯಿಂದಲೇ ದಸ್ತಾವೇಜುಗಳನ್ನು ಅಪ್ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಹಾಗೆಯೆ ವಿವಾಹ ನೋಂದಣಿಗೆ ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಬಹುದಾಗಿದೆ. ಇ-ಸಂಸ್ಥೆ ಪಾಲುದಾರಿಕೆ ಸಂಸ್ಥೆಗಳ ನೋಂದಣಿಯನ್ನು ಆನ್ಲೈನ್ ವ್ಯವಸ್ಥೆಯ ಮೂಲಕ ಸರಳ, ಸುಲಭ ಮಾರ್ಗಗಳ ಮೂಲಕ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಇ–ಸಂಯೋಜನೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ ಇಲಾಖೆಗಳೊಂದಿಗೆ ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಹಿತಿ ವಿನಿಮಯ ಮಾಡಿಕೊಂಡು ಜನಸ್ನೇಹಿಯಾದ ನೋಂದಣಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಇ–ದಾಖಲೆ: ಋಣಭಾರ ಪ್ರಮಾಣ ಪತ್ರಗಳು, ದೃಢೀಕೃತ ನಕಲು ಪ್ರತಿಗಳ ವಿತರಣೆಗೆ ಹಿಂದೆ ನಾಗರಿಕರು ಅರ್ಜಿ ಸಲ್ಲಿಸಲು ಮತ್ತು ಪ್ರಮಾಣ ಪತ್ರಗಳನ್ನು ಪಡೆಯಲು ಉಪ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಈಗ ಆ ಸಮಸ್ಯೆಯನ್ನು ಪರಿಹರಿಸಲಾಗಿದೆ.