ಗಾಜಾದಲ್ಲಿ ಇಸ್ರೇಲ್ ವಾಯುದಾಳಿ ನಡೆಸಿದ್ದು, ಆಹಾರಕ್ಕಾಗಿ ಕಾಯುತ್ತಿದ್ದ 94 ಪ್ಯಾಲೆಸ್ತೀನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಗಾಜಾದಲ್ಲಿ ಸ್ಥಳಾಂತರಗೊಂಡ ಜನರು ಮಲಗಿದ್ದಾಗ ರಾತ್ರಿ ಟೆಂಟ್ ಮೇಲೆ ನಡೆದ ದಾಳಿ ಇದಾಗಿದೆ. 12 ವರ್ಷದೊಳಗಿನ ಕನಿಷ್ಠ ಆರು ಮಕ್ಕಳು ಕೂಡ ಮೃತಪಟ್ಟಿದ್ದಾರೆ.
ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡಿದ್ದ ಶಾಲೆಯ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ 15 ಜನರು ಮೃತರಾಗಿದ್ದಾರೆ. ನೆರವು ಪಡೆಯುವ ವೇಳೆ ದಿನನಿತ್ಯ ಗುಂಡಿನ ದಾಳಿಯಲ್ಲಿ ಹೆಚ್ಚಿನ ಪ್ಯಾಲೆಸ್ತೀನಿಯನ್ನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗಾಜಾ ಪಟ್ಟಿಯ ಜನರಿಗೆ ಆಹಾರ ಒದಗಿಸಲು ಇಸ್ರೇಲ್ ಬೆಂಬಲದೊಂದಿಗೆ ರಚಿಸಲಾದ ಅಮೆರಿಕನ್ ಸಂಘಟನೆ ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ ಕೆಲಸ ಮಾಡುತ್ತಿದೆ. ಫೌಂಡೇಶನ್‌ನಿಂದ ಆಹಾರ ವಿತರಣಾ ತಾಣಗಳಿಗೆ ಹೋಗುವ ರಸ್ತೆಗಳಲ್ಲಿ ಐದು ಜನರು ಮೃತಪಟ್ಟಿದ್ದಾರೆ.
ಗಾಜಾದ ಸುತ್ತಮುತ್ತ ಹಲವೆಡೆ ವಿಶ್ವಸಂಸ್ಥೆಯ ನೆರವು ಸಾಗಿಸುವ ಟ್ರಕ್‌ಗಳಿಗಾಗಿ ಕಾಯುತ್ತಿದ್ದಾಗ 40 ಜನರು ಪ್ರಾಣ ಕಳೆದು ಕೊಂಡಿರುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ ತಾಣಗಳನ್ನು ತಲುಪಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ತೀನಿಯನ್ನರ ಗುಂಪಿನ ಮೇಲೆ ಇಸ್ರೇಲ್ ಪಡೆಗಳು ನಿಯಮಿತವಾಗಿ ಗುಂಡಿನ ದಾಳಿ ನಡೆಸುತ್ತಿವೆ. ಗಾಜಾದ ಮಿಲಿಟರಿ-ಚಾಲಿತ ವಲಯಗಳ ಬಳಿ ಜನರು ಗುಂಪುಗೂಡಿದ್ದಾಗ, ವಿಶ್ವಸಂಸ್ಥೆಯ ಟ್ರಕ್‌ಗಳು ಪ್ರವೇಶಿಸಲು ಮುಂದಾದಾಗ ಪಡೆಗಳು ಗುಂಡು ಹಾರಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.