ನವದೆಹಲಿ: ಭಾರತ ತಂಡ 7 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0ಯಿಂದ ಗೆದ್ದು ವಿಶ್ವದಾಖಲೆಯನ್ನು ಸರಿಗಟ್ಟಿದೆ.
ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 121 ರನ್ ಗಳ ಗುರಿ ಪಡೆದಿದ್ದ ಭಾರತ ತಂಡ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಭಾರತ ಒಂದು ತಂಡದ ವಿರುದ್ಧ ಅತೀ ಹೆಚ್ಚು ಸತತ ಸರಣಿ ಗೆಲುವು ದಾಖಲಿಸಿದ ದಾಖಲೆಗೆ ಪಾತ್ರವಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸತತ 10 ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಇದೇ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ 10 ಸರಣಿ ಗೆದ್ದು ವಿಶ್ವದಾಖಲೆ ಬರೆದಿತ್ತು.
ಭಾರತ 2002ರಿಂದ ಸತತವಾಗಿ ಸರಣಿ ಗೆದ್ದುಕೊಂಡು ಬಂದರೆ, ದ.ಆಫ್ರಿಕಾ 1997-2024ರ ನಡುವೆ ಈ ಸಾಧನೆ ಮಾಡಿತ್ತು.
ಆಸ್ಟ್ರೇಲಿಯಾ ತಂಡ ಸತತ 9 ಸರಣಿಯನ್ನು ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಮೂರನೇ ಸ್ಥಾನದಲ್ಲಿದೆ. ಇದೇ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು ಸತತ 8 ಸರಣಿಯಲ್ಲಿ ಸೋಲಿಸಿದ ದಾಖಲೆ ಹೊಂದಿದೆ. ಜಿಂಬಾಬ್ವೆ ವಿರುದ್ಧ ಶ್ರೀಲಂಕಾ 8 ಸರಣಿ ಗೆದ್ದು ನಂತರದ ಸ್ಥಾನದಲ್ಲಿದೆ.
ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ ಗೆದ್ದ ಮೊದಲ ಟೆಸ್ಟ್ ಸರಣಿ ಇದಾಗಿದೆ. ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಅಂತರದಿಂದ ಗೆದ್ದಿದ್ದ ಭಾರತ ಎರಡನೇ ಇನಿಂಗ್ಸ್ ನಲ್ಲಿ ಫಾಲೋಆನ್ ಹೇರಿತ್ತು. ಆದರೆ ಅನಿರೀಕ್ಷಿತ ಹೋರಾಟ ನಡೆಸಿದ ವೆಸ್ಟ್ ಇಂಡೀಸ್ 270 ರನ್ ಗಳ ಹಿನ್ನಡೆ ತಪ್ಪಿಸಿಕೊಂಡಿದ್ದೂ ಅಲ್ಲದೇ ಭಾರತಕ್ಕೆ 121 ರನ್ ಗುರಿ ಒಡ್ಡಿತ್ತು.
ಭಾರತದ ಪರ ಕೆಎಲ್ ರಾಹುಲ್ 108 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವನಿಂದ 58 ರನ್ ಬಾರಿಸಿ ಅಜೇಯರಾಗಿ ಉಳಿದರು. ಸಾಯಿ ಸುದರ್ಶನ್ 39 ಮತ್ತು ಗಿಲ್ 13 ರನ್ ಗಳಿಸಿದರು.