ನವದೆಹಲಿ: ತಾಯಿ ಹಾಗೂ ಮಗನ ಕತ್ತು ಸೀಳಿ ಮನೆ ಕೆಲಸದವ ಬರ್ಬರವಾಗಿ ಕೊಲೆ ಮಾಡಿದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಲಜ್‌ಪತ್ ನಗರದಲ್ಲಿ ತಾಯಿ ರುಚಿಕಾ ಸೇವಾನಿ (42) ಹಾಗೂ ಮಗ ಕ್ರಿಶ್ (14) ಕೊಲೆ ಆದ ದುರ್ದೈವಿಗಳು. ಮನೆ ಕೆಲಸಕ್ಕೆ ಇದ್ದ ಮುಖೇಶ್ (24) ಕೊಲೆ ಮಾಡಿ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ರುಚಿಕಾ ಹಾಗೂ ಆಕೆಯ ಪತಿ ಕುಲದೀಪ್ ಸೇವಾನಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಇದೇ ಅಂಗಡಿಯಲ್ಲಿ ಆರೋಪಿ ಮುಖೇಶ್ ಚಾಲಕ ಹಾಗೂ ಸಹಾಯನಾಗಿ ಕೆಲಸ ಮಾಡುತ್ತಿದ್ದ.
ಮನೆಗೆ ಬಂದಿದ್ದ ಮುಖೇಶ್ ನನ್ನು ರುಚಿಕಾ ಗದರಿದ್ದಾಳೆ. ಇದರಿಂದ ಕೋಪಗೊಂಡ ಆತ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.
ಪತಿ ಕುಲದೀಪ್ ಪದೇಪದೆ ಪತ್ನಿ ಹಾಗೂ ಮಗನಿಗೆ ಕರೆ ಮಾಡಿದರೂ ಸ್ವೀಕರಿಸದ ಕಾರಣ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕುಲದೀಪ್ ಮನೆಗೆ ಪ್ರವೇಶಿಸುತ್ತಿದ್ದಂತೆ ಗೇಟ್, ಮೆಟ್ಟಿಲು ಹಾಗೂ ಸ್ಟೇರ್ ಕೇಸ್ ಬಳಿ ರಕ್ತ ಬಿದ್ದಿರುವುದನ್ನು ಗಮನಿಸಿ ಆಘಾತಗೊಂಡಿದ್ದಾರೆ.
ಬುಧವಾರ ರಾತ್ರಿ ಸುಮಾರು 9:40ಕ್ಕೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪತ್ನಿ ರುಚಿತಾಳ ಮೃತದೇಹ ಬೆಡ್‌ರೂಮ್‌ನಲ್ಲಿ ಹಾಗೂ ಮಗನ ಮೃತದೇಹ ಬಾತ್‌ರೂಮ್‌ನಲ್ಲಿ ಪತ್ತೆಯಾಗಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಎರಡು ದೇಹಗಳ ಮೇಲೆಯೂ ಮಾರಣಾಂತಿಕ ಹಲ್ಲೆ ಇರುವುದು ಪತ್ತೆಯಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.