ವಿಚ್ಛೇದಿತ ಪತ್ನಿ ಹಾಗೂ ಮಗಳಿಗೆ ತಿಂಗಳಿಗೆ 4 ಲಕ್ಷ ರೂ. ನಿರ್ವಹಣಾ ವೆಚ್ಚವನ್ನು ನೀಡುವಂತೆ ಕಲ್ಕತ್ತಾ ಹೈಕೋರ್ಟ್ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಆದೇಶ ನೀಡಿದೆ. ಆದರೆ ಶಮಿ ಅವರ ಲಕ್ಸುರಿ ಲೈಫ್‌ಸ್ಟೈಲ್‌ಗೆ ಹೋಲಿಸಿದರೆ ಈ ಮೊತ್ತ ತುಂಬಾ ಕಡಿಮೆ, ಕನಿಷ್ಠ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಪತ್ನಿ ಹಸೀನಾ ಜಹಾನ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಹಸೀನಾ ಜಹಾನ್, ಈ ತೀರ್ಪಿಗೆ ಪ್ರತಿಯಾಗಿ ತಾನು ಕೇವಿಯಟ್ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ತಿಂಗಳಿಗೆ 10 ಲಕ್ಷ ರೂಪಾಯಿ ನಿರ್ವಹಣಾ ವೆಚ್ಚಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಜೀವನ ವೆಚ್ಚ ಹೆಚ್ಚಾಗಿದೆ. ಶಮಿಯ ಒತ್ತಾಯದಂತೆ ತಾನು ಮಾಡೆಲಿಂಗ್ ಹಾಗೂ ನಟನಾ ವೃತ್ತಿಯನ್ನು ಬಿಟ್ಟೆ. ನನಗೆ ನನ್ನದೇ ಆದ ಆದಾಯದ ಮೂಲಗಳಿಲ್ಲ ಎಂದು ಹೇಳಿದ್ದಾರೆ.
ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ತಿಂಗಳಿಗೆ 4 ಲಕ್ಷ ಪರಿಹಾರ ನೀಡುವ ಆದೇಶದ ಬಗ್ಗೆ ನ್ಯಾಯಾಧೀಶರು ಸ್ಪಷ್ಟನೆ ನೀಡಿದ್ದು, ಶಮಿ ಅವರ ಆದಾಯ ಹಾಗೂ ಹಸೀನಾ ಜಹಾನ್ ಜೀವಶೈಲಿ ಎರಡನ್ನೂ ಲೆಕ್ಕಾಚಾರ ಮಾಡಿ ಈ ಪರಿಹಾರ ಮೊತ್ತ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
2014ರ ಏಪ್ರಿಲ್‌ನಲ್ಲಿ ಮೊಹಮ್ಮದ್ ಶಮಿ ಹಾಗೂ ಹಸೀನಾ ಜಹಾನ್ ಮದುವೆಯಾಗಿದ್ದರು. ಮದುವೆಯಾದ 4 ವರ್ಷಗಳ ನಂತರ ದಾಂಪತ್ಯದಲ್ಲಿ ವಿರಸ ಕಂಡು ಬಂದಿದೆ. 2018ರ ಮಾರ್ಚ್‌ನಲ್ಲಿ ಹಸೀನಾ ಶಮಿ ಹಾಗೂ ಕುಟುಂಬದವರ ವಿರುದ್ಧ ದೈಹಿಕ ಹಾಗೂ ಮಾನಸಿಕ ಹಿಂಸೆಯ ಆರೋಪ ಮಾಡಿ ಕೇಸ್ ದಾಖಲಿಸಿದ್ದರು. ಮೊಹಮ್ಮದ್ ಶಮಿ ಇತರ ಮಹಿಳೆಯ ಜೊತೆ ಆತ್ಮೀಯವಾಗಿದ್ದಾರೆ ಎಂದೂ ಆರೋಪಿಸಿದ್ದರು.