ಬೆಂಗಳೂರು:ಐಪಿಎಲ್ ನಲ್ಲಿ ಆರ್ ಸಿಬಿ ಜಯಗಳಿಸಿದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ್ದ ಕಾಲ್ತುಳಿತ ಸಂಬಂಧ ನಡೆಯುತ್ತಿರುವ ನ್ಯಾಯಾಂಗ ತನಿಖೆಯ ವರದಿಯು 10 ದಿನಗಳಲ್ಲಿ ಬರುವ ಸಾಧ್ಯತೆಯಿದೆ.
ಕಾಲ್ತುಳಿತ ಪ್ರಕರಣ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಮುಂದಿನ ಸುಮಾರು 10 ದಿನಗಳಲ್ಲಿ ನ್ಯಾಯಾಂಗ ತನಿಖೆಯ ವರದಿ ಬರುವ ಸಾಧ್ಯತೆಯಿದೆ. ಅದನ್ನು ನ್ಯಾಯಾಲಯಕ್ಕೆ ಒದಗಿಸಲಾಗುವುದು. ಹಾಗಾಗಿ, ಅರ್ಜಿ ವಿಚಾರಣೆಯನ್ನು 10 ದಿನಗಳ ನಂತರಕ್ಕೆ ಮಂದೂಡಬೇಕು” ಎಂದು ಕೋರಿದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ”ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ವಸ್ತುಸ್ಥಿತಿ ವರದಿ/ದಾಖಲೆಗಳನ್ನು ಏಕೆ ಮುಚ್ಚಿದ ಲಕೋಟೆಯಲ್ಲಿಯೇ ಇರಿಸಬೇಕು? ಎಂದು ಎಜಿಯವರನ್ನು ಪ್ರಶ್ನಿಸಿತು.
ಪ್ರಕರಣದ ಅಮಿಕಸ್ ಕ್ಯೂರಿಯಾದ ಹಿರಿಯ ವಕೀಲೆ ಸುಶೀಲಾ, ”ಈಗಾಗಲೇ ಹಲವು ಬಾರಿ ವಿಚಾರಣೆ ಮುಂದೂಡಿಕೆಯಾಗಿದೆ. ಸರ್ಕಾರ ಸಲ್ಲಿಸಿರುವ ದಾಖಲೆಗಳು ಏಕೆ ಬಹಿರಂಗಪಡಿಸಬಾರದು ಎಂಬುದಕ್ಕೆ ಸರ್ಕಾರವು ನ್ಯಾಯ ಸಮ್ಮತವಾದ ಕಾರಣ ನೀಡುತ್ತಿಲ್ಲ. 10-15 ದಿನಗಳ ನಂತರ ದಾಖಲೆಗಳನ್ನು ಬಹಿರಂಗಪಡಿಸುವ ರಾಜ್ಯದ ನಿಲುವನ್ನು ನಮ್ಮ ನ್ಯಾಯ ವಿತರಣಾ ವ್ಯವಸ್ಥೆ ಅನುಮೋದಿಸುವುದಿಲ್ಲ. ವರದಿಯು ಪಾರದರ್ಶಕವಾಗಿರಬೇಕಿದೆ. ಅದನ್ನು ಸಾರ್ವಜನಿಕರು ನೋಡಬೇಕಾಗುತ್ತದೆ” ಎಂದು ಆಕ್ಷೇಪಿಸಿದರು.
ಇದಕ್ಕೆ ಎಜಿ ಉತ್ತರಿಸಿ,ಮ್ಯಾಜಿಸ್ಟೀರಿಯಲ್ ವಿಚಾರಣೆ ಅಥವಾ ನ್ಯಾಯಾಂಗ ಆಯೋಗದ ಸ್ಥಿತಿಗತಿ ವರದಿಯನ್ನು ಬಳಸಿಕೊಳ್ಳಬಾರದು. ಸ್ವತಂತ್ರ ಹಾಗೂ ನಿಷ್ಪಕ್ಷಪಾತ ವಿಚಾರಣೆ ನಡೆಯಬೇಕಿದೆ. ಆ ಉದ್ದೇಶದಿಂದ ವರದಿ ಬಹಿರಂಗವಾಗಬಾರದು. ಅದನ್ನು ಮುಚ್ಚಿದ ಲಕೋಟೆಯಲ್ಲಿ ಇಡುವಂತೆ ಕೋರಲಾಗುತ್ತಿದೆ” ಎಂದು ಸಮಜಾಯಿಷಿ ನೀಡಿದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು