ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವು ಸರಣಿ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ನಾಲ್ವರು ಹೃದಯಾಘಾತಗೊಂಡು ಮೃತಪಟ್ಟಿದ್ದಾರೆ. ಈ ಬೆಳವಣಿಗೆಯು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಸಂಪತ್‌ಕುಮಾರ್ (53), ಸಿ.ಬಿ ವಿರೂಪಾಕ್ಷ (70), ಸಂತೋಷ್ (41), ದೇವಮ್ಮ (72) ಮೃತಪಟ್ಟವರು.
ಹಾಸನ ನಗರದ ಕರಿಗೌಡ ಕಾಲೋನಿ ನಿವಾಸಿ ಸಂಪತ್‌ಕುಮಾರ್‌ಗೆ ಎದೆನೋವು ಕಾಣಿಸಿಕೊಂಡ ಕೂಡಲೇ ಅವರನ್ನು ಕುಟುಂಬಸ್ಥರು ಹಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ.
ಸಕಲೇಶಪುರ ಬೆಳಗೋಡು ಹೋಬಳಿ ಚಿಕ್ಕನಾಯಕನಹಳ್ಳಿ ಗ್ರಾಮದ ಸಿ.ಬಿ ವಿರೂಪಾಕ್ಷ ಅವರಿಗೆ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು,ಮನೆಯವರು ತಕ್ಷಣ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
ಆಲೂರು ತಾಲೂಕಿನ ಕಲ್ಲಾರೆ ಗ್ರಾಮದಲ್ಲಿ ಸಂತೋಷ್ ರಾತ್ರಿ ಮಲಗಿದ್ದಲ್ಲಿಯೇ ಹೃದಯಾಘಾತಗೊಂಡು ಮೃತಪಟ್ಟಿದ್ದಾರೆ. ಬೆಳಗ್ಗೆ ಅವರು ಮೇಲೆಳದಿದ್ದಾಗ ಕುಟುಂಬಸ್ಥರು ನೋಡಿ ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸಕಲೇಶಪುರ ಅರೆಕೆರೆ ಗ್ರಾಮದಲ್ಲಿ ದೇವಮ್ಮ (72) ಮನೆಯಲ್ಲಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದೆ. ಬೆಂಗಳೂರು ಜಯದೇವ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ, ಚಿಕಿತ್ಸೆ, ಔಷಧಿ ಪಡೆದು ಗ್ರಾಮಕ್ಕೆ ವಾಪಸಾಗುತ್ತಿದ್ದರು. ಆಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.