ರಿಷಭ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ ಕಾಂತಾರ ಚಾಪ್ಟರ್ 1 ಚಿತ್ರ ಬಿಡುಗಡೆ ಆಗಿ ಎರಡು ವಾರ ಪೂರೈಸುವ ಮುನ್ನವೇ 655 ಕೋಟಿ ರೂ. ಬಾಚಿಕೊಂಡಿದೆ. ಇದರ ಬೆನ್ನಲ್ಲೇ ಚಿತ್ರೀಕರಣ ವೇಳೆ ಅನುಭವಿಸಿದ ಕಷ್ಟಗಳ ಕುರಿತು ರಿಷಭ್ ಶೆಟ್ಟಿ ಫೋಟೊ ಹಂಚಿಕೊಂಡಿದ್ದಾರೆ.
ಅಕ್ಟೋಬರ್ 2ರಂದು ಬಿಡುಗಡೆ ಆದ ಕಾಂತಾರ ಚಿತ್ರ 11 ದಿನ ಕಳೆದಿದ್ದರೂ ಗಳಿಕೆಯಲ್ಲಿ ಕುಸಿತ ಕಾಣದೇ ಮುನ್ನುಗ್ಗುತ್ತಿದೆ. ಇದೇ ರೀತಿ ಮುನ್ನುಗ್ಗಿದರೆ ಚಿತ್ರ 1000 ಕೋಟಿ ರೂ. ಗಡಿ ದಾಟುವ ಸಾಧ್ಯತೆ ಇದೆ ಎಂದು ಚಿತ್ರ ಪಂಡಿತರು ವಿಶ್ಲೇಷಿಸಿದ್ದಾರೆ.
ಕಾಂತಾರ ಚಾಪ್ಟರ್-1 ಕರ್ನಾಟಕದಲ್ಲಿ 191 ಕೋಟಿಗೂ ಅಧಿಕ ಗಳಿಕೆ ಮಾಡಿ ಹೊಸ ದಾಖಲೆ ಬರೆದಿದ್ದು, ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಕೆಜಿಎಫ್-2 ದಾಖಲೆಯನ್ನು ಮುರಿದಿದೆ.
ಕಾಂತಾರ ಚಿತ್ರ ವೀಕ್ಷಿಸಿದವರ ಸಂಖ್ಯೆ 1 ಕೋಟಿ ದಾಟುವ ಮೂಲಕ ಮತ್ತೊಂದು ದಾಖಲೆ ಬರೆದಿದೆ. ಮುಂದಿನ ವಾರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕಾಂತಾರ ಚಿತ್ರದ ಆದಾಯ ಇನ್ನೆರಡು ವಾರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಾಂತಾರಕ್ಕೆ ಪೈಪೋಟಿ ನೀಡಲು ದೊಡ್ಡ ಬಜೆಟ್ ಹಾಗೂ ನಿರೀಕ್ಷೆ ಹುಟ್ಟಿಸಿದ ಯಾವುದೇ ಚಿತ್ರಗಳು ಇಲ್ಲದ ಕಾರಣ ಕಾಂತಾರಕ್ಕೆ ಇದು ಹೆಚ್ಚು ಅನುಕೂಲವಾಗಲೊಇದೆ
ಕ್ಲೈಮ್ಯಾಕ್ಸ್ ನಲ್ಲಿ ಊದಿದ ಕಾಲು: ಫೋಟೊ ಬಿಡುಗಡೆ
ಕಾಂತಾರ ಚಿತ್ರದ ಯಶಸ್ಸಿನ ಬೆನ್ನಲ್ಲೇ ರಿಷಭ್ ಶೆಟ್ಟಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಕಾಲು ಊದಿಕೊಂಡು ಅನುಭವಿಸಿದ ಯಾತನೆಯ ಫೋಟೊಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಅನುಭವಿಸಿದ ಕಷ್ಟಕ್ಕೆ ಜನರ ಮೆಚ್ಚುಗೆಯಿಂದ ಮರೆತು ಹೋಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಸಾಹಸ ಸನ್ನಿವೇಶಗಳ ಝಲಕ್, ಕಾಂತಾರದ ವಾವ್ ಎನ್ನಿಸುವ ಕ್ಲೈಮ್ಯಾಕ್ಸ್ (Kantara Climax) ಇವೆಲ್ಲವನ್ನ ಕೆಲನಿಮಿಷ ನೋಡಿ ಅಬ್ಬಬ್ಬಾ ಅಂತಾ ಹೇಳ್ತೀವಿ. ಆದ್ರೆ ಈ ದೃಶ್ಯಗಳನ್ನ ಶೂಟಿಂಗ್ ಮಾಡುವ ವೇಳೆ ತೆರೆಹಿಂದೆ ಕಲಾವಿದರು, ತಂತ್ರಜ್ಞರು ಪಡುವ ಕಷ್ಟ ಹೇಗಿರುತ್ತೆ ಅನ್ನೋದು ಮಾತ್ರ ಯಾರಿಗೂ ಗೊತ್ತಿರೋಲ್ಲ. ಇವತ್ತು ಕಾಂತಾರ ಸಿನಿಮಾವನ್ನ ಮೆಚ್ಚಿ ಹಾಡಿ ಹೊಗಳುತ್ತಿರೋದಕ್ಕೆ ತೆರೆ ಮರೆಯಲ್ಲಿ ಆದ ಆ ದಿನದ ಹೋರಾಟ ಹೇಗಿತ್ತು ಅಂತಾ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.
ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯದಲ್ಲಿ ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ, ಸುಸ್ತಾಗಿ ಮಲಗಿದ್ದ ರಿಷಬ್ ಶೆಟ್ಟಿ. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ ಅಂದ್ರೆ ಅದಕ್ಕೆ ತೆರೆಹಿಂದೆ ನಾವು ಪಟ್ಟ ಶ್ರಮದ ಜೊತೆಗೆ ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ ಎಂದು ಜಾಲತಾಣದಲ್ಲಿ ಡಿವೈನ್‌ಸ್ಟಾರ್ ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.
ಕ್ಲೈಮ್ಯಾಕ್ಸ್ ಟೈಮಲ್ಲಿ ತಮ್ಮ ಕಾಲಿಗೆ ಆದ ನೋವುಗಳನ್ನ ಕೆಲ ಫೋಟೋಗಳ ಸಮೇತ ಹಂಚಿಕೊಂಡಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಈ ಮೂಲಕ ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ಜಾಲತಾಣದಲ್ಲಿ ಶೂಟಿಂಗ್ ಅನುಭವ ಹಂಚಿಕೊಂಡಿದ್ದಾರೆ ನಟ. ಒಟ್ಟಿನಲ್ಲಿ ತೆರೆಯ ಹಿಂದಿನ ಪರಿಶ್ರಮಗಳೆಲ್ಲವು ಇಂದು ತೆರೆಯ ಮೇಲೆ ಸಕ್ಸಸ್ ಆಗಿ ಕಾಣ್ತಿರೋದಂತೂ ನಿಜ.