“ಬೆಂಗಳೂರು ನಗರದ ಹೆಬ್ಬಾಳ ನಾಗವಾರ ಕಣಿವೆಯ ದ್ವಿತೀಯ ಹಂತದ ಸಂಸ್ಕರಿತ ನೀರನ್ನು ಶಿಡ್ಲಘಟ್ಟ ಅಮಾನಿ ಕೆರೆಯಿಂದ ಶಿಡ್ಲಘಟ್ಟದ 45 ಕೆರೆಗಳಿಗೆ, ಚಿಂತಾಮಣಿ ತಾಲೂಕಿನ 119 ಕೆರೆಗಳಿಗೆ ಸೇರಿದಂತೆ ಒಟ್ಟು 164 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಲು ರೂ.237 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಸಭೆಯ ತೀರ್ಮಾನಗಳ ಬಗ್ಗೆ ಮಾಹಿತಿ ನೀಡಿದರು.
ಚಿಂತಾಮಣಿಯ ಭಕ್ತರಹಳ್ಳಿ ಅರಸಿಕೆರೆಯ ಕೆಳಭಾಗದಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ರೂ.36 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ನಾಡಪ್ರಭು ಕೆಂಪೇಗೌಡ ಕೋಟೆ ನವೀಕರಣ, ಸಮಗ್ರ ಅಭಿವೃದ್ಧಿ ಕಾಮಗಾರಿಗೆ ರೂ.103 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಪಾತುಪಾಳ್ಯ ಹೋಬಳಿಯ ಮಲ್ಲಮ್ಮ ಕಣಿವೆಯಲ್ಲಿ ಜಲಾಶಯ ನಿರ್ಮಾಣಕ್ಕೆ ಜಲಸಂಪನ್ಮೂಲ ಇಲಾಖೆಯಿಂದ ರೂ.189 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣವನ್ನು ಭಾಗ್ಯನಗರವಾಗಿ ಮರುನಾಮಕಾರಣ ಮಾಡಲು ಕೇಂದ್ರ ಗೃಹ ಮಂತ್ರಾಲಯದ ನಿರಪೇಕ್ಷಣ ಪತ್ರ ಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಗಣಿಗಾರಿಕೆಯಲ್ಲಿ ನಡೆದ ಅಕ್ರಮ ತನಿಖೆ ನಡೆಸಿದ ಲೋಕಾಯುಕ್ತ ವಿಶೇಷ ತಂಡದ ವರದಿ ಅಧ್ಯಯನ ಮಾಡಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಕಾನೂನು ಸಚಿವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಹಿಂದೆ ರಚಿಸಲಾಗಿದ್ದ ಉಪಸಮಿತಿಯಲ್ಲಿ ಅನೇಕ ನ್ಯೂನ್ಯತೆ ಕಂಡುಹಿಡಿಯಲಾಗಿತ್ತು. ಆದರೆ ನಂತರ ನಮ್ಮ ಸರ್ಕಾರ ಪತನಗೊಂಡಿತ್ತು. ಈ ಅಕ್ರಮದಿಂದ ಆಗಿರುವ ನಷ್ಟವನ್ನು ಹೇಗೆ ಭರಿಸಬೇಕು ಎಂಬ ಸಲಹೆ ಬಂದಿತ್ತು. ಮುಂದೆ ನಮ್ಮ ರಾಜ್ಯದ ಸಂಪತ್ತನ್ನು ಹೇಗೆ ಕಾಪಾಡಬೇಕು ಎಂಬ ಉದ್ದೇಶದಿಂದ ಈಗ ಈ ಉಪಸಂಪುಟ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಹೋಟೆಲ್ ಹಾಗೂ ಇತರೆ ಸೌಲಭ್ಯಕ್ಕಾಗಿ ರೂ.50 ಕೋಟಿ ನೀಡಲಾಗಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪುರಸಭೆ ಹಾಗೂ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ಪುರಸಭೆಯನ್ನು ನಗರ ಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಕೊಪ್ಪಳ ಜಿಲ್ಲೆ ಹನುಮಸಾಗರ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ವಿವರಿಸಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಿಂದ ಹಿಂದುಳಿದ ವರ್ಗದ 14 ವಸತಿ ಶಾಲೆ ನಿರ್ಮಾಣಕ್ಕೆ ರೂ.306 ಕೋಟಿ ಅನುದಾನ ನೀಡಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ಮೊರಾರ್ಜಿ ವಸತಿ ಶಾಲೆ ಪ್ರಾರಂಭಕ್ಕೆ ಅನುಮೋದನೆ. ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ರೂ.141 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಒಪ್ಪಿಗೆ. ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಹಾಗೂ ಚಿಂತಾಮಣಿಯ ಕೈವಾರದಲ್ಲಿ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ತೀರ್ಮಾನ. ಚಿಂತಾಮಣಿ ಹಾಗೂ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು 60 ಹಾಸಿಗೆಗಳ ಮೇಲ್ದರ್ಜೆಗೆ ಏರಿಸಿ ನವೀಕರಣ ಮಾಡಲು ರೂ.36 ಕೋಟಿ ಅನುದಾನ ನೀಡಿದ್ದೇವೆ ಎಂದು ಹೇಳಿದರು.
ಕೋಲಾರದಲ್ಲಿ ಬಾಲಕರ ಸರ್ಕಾರಿ ಕಾಲೇಜು ಮೂಲಭೂತ ಸೌಕರ್ಯಕ್ಕಾಗಿ ರೂ.40 ಕೋಟಿ ಹಾಗೂ ಬಾಲಕಿಯರ ಕಾಲೇಜಿನ ಮೂಲಭೂತ ಸೌಕರ್ಯಕ್ಕೆ ರೂ.20 ಕೋಟಿ ನೀಡಲು ಅನುಮೋದನೆ ನೀಡಲಾಗಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಅಮರಾವತಿ ಗ್ರಾಮದಲ್ಲಿ ಬೆಂಗಳೂರು ಉತ್ತರ ವಿವಿಯ ನೂತನ ಕ್ಯಾಂಪಸ್ ಎರಡನೇ ಹಂತದ ಕಾಮಗಾರಿಗೆ ರೂ.123 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ಕಾಲೇಜು ಹಾಗೂ ಹುಬ್ಬಳ್ಳಿ ಕರ್ನಾಟಕ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಎಂಆರ್ ಐ ಯಂತ್ರಗಳ ಖರೀದಿಗೆ ರೂ.21 ಕೋಟಿ ನೀಡಲು ಅನುಮೋದನೆ ಎಂದು ತಿಳಿಸಿದರು.