ಇನ್ಫೋಸಿಸ್ ಕಚೇರಿಯ ಶೌಚಾಲಯದಲ್ಲಿ 30ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಬಟ್ಟೆ ಬದಲಿಸುವ ದೃಶ್ಯವನ್ನು ರಹಸ್ಯವಾಗಿ ಸೆರೆಹಿಡಿದಿದ್ದ ಕಂಪನಿಯ ಹೀಲೀಕ್ಸ್ ಡಿಪಾರ್ಟ್‌ಮೆಂಟ್‌ನ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್‌ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಸ್ವಪ್ನಿಲ್ ನಾಗೇಶ್ ಮಲಿ (28) ಬಂಧಿತ. ಬೆಂಗಳೂರಿನಲ್ಲಿರುವ ಇನ್ಫೋಸಿಸ್ ಕಚೇರಿಯ ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಯ ವೀಡಿಯೊ ರೆಕಾರ್ಡ್ ಮಾಡುತ್ತಿರುವಾಗಲೇ ಸ್ವಪ್ನಿಲ್ ಸಿಕ್ಕಿಬಿದ್ದಿದ್ದ.
ಶೌಚಾಲಯಕ್ಕೆ ತೆರಳಿದ್ದ ಮಹಿಳಾ ಉದ್ಯೋಗಿಗಳು ಬಟ್ಟೆ ಬದಲಿಸುವ ದೃಶ್ಯವನ್ನು ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ರೆಕಾರ್ಡ್ ಮಾಡುತ್ತಿದ್ದ, ಈತ ರೆಕಾರ್ಡ್ ಮಾಡುತ್ತಿರುವುದು ಎದುರುಗಡೆಯ ಡೋರ್ ಮೇಲೆ ರಿಪ್ಲೆಕ್ಟ್ ಆಗಿದ್ದನ್ನು ಗಮನಿಸಿದ ಮಹಿಳೆಯೊಬ್ಬರು ಕೂಡಲೇ ಹೊರಬಂದು ನೋಡಿದಾಗ ಯುವತಿ ಮಾತ್ರ ಕಂಡಿದ್ದಾಳೆ. ಮತ್ತೆ ಶೌಚಾಲಯದ ಒಳಹೋಗಿ ಪರಿಶೀಲಿಸಿದಾಗ ಶೌಚಾಲಯಕ್ಕೆ ತೆರಳಿದ್ದ ಮಹಿಳಾ ಉದ್ಯೋಗಿಗಳು ಬಟ್ಟೆ ಬದಲಿಸುವ ದೃಶ್ಯವನ್ನು ಪಕ್ಕದ ಶೌಚಾಲಯದ ಕಮೋಡ್ ಮೇಲೆ ನಿಂತು ವೀಡಿಯೊ ರೆಕಾರ್ಡ್ ಮಾಡುತ್ತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ವಪ್ನಿಲ್‌ನನ್ನು ಕರೆಸಿದ ಆಡಳಿತ ಆತನ ಮೊಬೈಲ್ ಪರಿಶೀಲಿಸಿದಾಗ ಇದೇ ರೀತಿ 30ಕ್ಕೂ ಹೆಚ್ಚು ಮಹಿಳೆಯರ ವೀಡಿಯೊ ಸೆರೆ ಹಿಡಿದಿರುವುದು ಪತ್ತೆಯಾಗಿದೆ. ಕಂಪೆನಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರಿಗೆ ದೂರು ನೀಡುವ ಬದಲು ಆತ ಕ್ಷಮೆ ಯಾಚಿಸುವಂತೆ ಮಾಡಿ ಸುಮ್ಮನಾಗಿದ್ದಾರೆ.
ಮಹಿಳಾ ಉದ್ಯೋಗಿ ಪತಿಗೆ ಈ ವಿಚಾರ ತಿಳಿಸಿದಾಗ ಪತಿ ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಇನ್ಫೋಸಿಸ್ ಕಂಪನಿಯ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಬುಧವಾರ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಆರೋಪಿ ಸ್ವಪ್ನಿಲ್‌ನನ್ನು ಬಂಧಿಸಿದ್ದಾರೆ.