ನವದೆಹಲಿ: ಸಿಗರೇಟು, ಕಾರ್ಬೊನೇಟ್ ಡ್ರಿಂಕ್ಸ್, ಮದ್ಯ, ಐಷಾರಾಮಿ ಕಾರುಗಳ ಮೇಲೆ ಸೆಸ್ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಆರೋಗ್ಯ ಮತ್ತು ಸ್ವಚ್ಛತಾ ಯೋಜನೆಗಳಿಗೆ ಹೆಚ್ಚುವರಿ ಹಣ ಸಂಗ್ರಹಿಸಲು ಆಟೋಮೊಬೈಲ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಸೆಸ್ ಹೇರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಒಂದು ವೇಳೆ ಸೆಸ್ ಹೇರಿದರೆ ಈ ಕ್ಷೇತ್ರದ ಉತ್ಪನ್ನಗಳ ಬೆಲೆ ದುಬಾರಿ ಆಗಲಿದೆ.
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ ಪರಿಹಾರ ಸೆಸ್ ವಿಧಿಸಿರುವ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಮುಂದುವರಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇದ್ದು, ಇದೇ ತಿಂಗಳಾಂತ್ಯದಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಧರಿಸಿದರೆ ಆಟೋಮೊಬೈಲ್ ಮತ್ತು ತಂಬಾಕು ಉತ್ಪನ್ನಗಳ ದರ ಏರಿಕೆಯಾಗಲಿದೆ.
ಆಟೋಮೊಬೈಲ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಶೇಕಡಾ 28 ರಷ್ಟು ಜಿಎಸ್‌ಟಿ ವಿಧಿಸಲಾಗಿದ್ದು, ಇವುಗಳಿಗೆ ಆರೋಗ್ಯ ಸೆಸ್ ಅನ್ವಯಿಸುತ್ತಿದೆ. ಇದರಲ್ಲಿ ಶುದ್ಧ ಇಂಧನ, ಕಲ್ಲಿದ್ದಲು ಮುಂತಾದ ಕಚ್ಚಾ ವಸ್ತುಗಳ ಬಳಕೆಯ ಸೆಸ್ ಕೂಡ ಸೇರಿವೆ.
ಸಹಾಯಕ ಕೇಂದ್ರ ಹಣಕಾಸು ಸಚಿವ ಪಂಕಜ್ ಚೌಧರಿ ಅಧ್ಯಕ್ಷತೆಯಲ್ಲಿ ಪರಿಹಾರ ಸೆಸ್‌ನ ಮೇಲಿನ ಸಚಿವರ ಗುಂಪು ಅಥವಾ GoM ಸಮಿತಿಯು ಈ ತಿಂಗಳ ಕೊನೆಯಲ್ಲಿ ಈ ವಿಷಯವನ್ನು ಚರ್ಚಿಸುವ ನಿರೀಕ್ಷೆಯಿದೆ.