ಬೆಂಗಳೂರು: ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಎಸ್‍ಐಟಿಗೆ ಕಪಾಳಮೋಕ್ಷ ಮಾಡುವ ಕೆಲಸವನ್ನು ಹೈಕೋರ್ಟ್ ಮಾಡಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದ ತನಿಖೆಯನ್ನು ರಾಜ್ಯ ಹೈಕೋರ್ಟ್ ಸಿಬಿಐಗೆ ನೀಡಿದೆ ಎಂದು ತಿಳಿಸಿದರು. ಎಸ್‍ಐಟಿ ರಚನೆ ಮೂಲಕ ಕ್ಲೀನ್ ಚಿಟ್ ಕೊಡಲಾಗಿತ್ತು. ಹಗರಣವನ್ನು ಅಧಿಕಾರಿಗಳ ಮೇಲೆ ಹೊತ್ತು ಹಾಕುವ ಪ್ರಯತ್ನ ಆಗಿತ್ತು ಎಂದು ಆರೋಪಿಸಿದರು.
ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ, ಸರಕಾರದ ಹಣವನ್ನು ನುಂಗಿ ಚುನಾವಣೆಗೆ ಬಳಸಿದ್ದರು. ಈ ಹಗರಣಕ್ಕೆ ಹಣಕಾಸು ಇಲಾಖೆ ನಿರ್ವಹಿಸುವ ಮುಖ್ಯಮಂತ್ರಿಗಳೂ ಜವಾಬ್ದಾರರು ಎಂದ ಅವರು, ಬಳ್ಳಾರಿ ಸಂಸದರು ರಾಜೀನಾಮೆ ನೀಡಲಿ; ನಾಗೇಂದ್ರ, ಗಣೇಶ್, ಡಾ.ಶ್ರೀನಿವಾಸ್, ಭರತ್ ರೆಡ್ಡಿ ಎಲ್ಲರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ರಾಜಕಾರಣದಲ್ಲಿ ಗೆಲುವು ಶಾಶ್ವತವೇ ಎಂದು ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದ ಅವರು, ಒಬ್ಬ ಮನುಷ್ಯ ಗೆಲ್ಲಲು ಇನ್ನೊಬ್ಬ ಸೋಲಲೇಬೇಕು. ಪ್ರಧಾನಿ, ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದವರೂ ಸೋತಿದ್ದಾರೆ. 2018ರಲ್ಲಿ ಸಿದ್ದರಾಮಯ್ಯನವರು ಬಾದಾಮಿ- ಚಾಮುಂಡಿಯಲ್ಲಿ ಸ್ಪರ್ಧಿಸಿದ್ದರು. ಬಾದಾಮಿಯಲ್ಲಿ ಕೇವಲ 1700 ಮತದಿಂದ ಗೆದ್ದಿದ್ದಾರೆ. ನಾನು ಎರಡು ಕಡೆ ಸ್ಪರ್ಧೆ ಮಾಡಿದ್ದೆ. ನನ್ನ ವಿರುದ್ಧ ಗೆದ್ದವರು 1700 ಮತ ಹೆಚ್ಚು ಪಡೆದರು. ಅದರಲ್ಲಿ ಸಾವಿರ ಮತ ನನಗೆ ಬರುತ್ತಿದ್ದರೆ, ನೀವು ಮುಖ್ಯಮಂತ್ರಿ ಆಗಲು ಸಾಧ್ಯವಿತ್ತೇ ಎಂದು ಕೇಳಿದರು.
ಚಾಮುಂಡಿ ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮತದಿಂದ ನೀವು ಸೋಲಲಿಲ್ಲವೇ ಎಂದು ಪ್ರಶ್ನೆ ಮಾಡಿದರು. ಸಿದ್ದರಾಮಯ್ಯನವರ ಜನಪ್ರಿಯತೆ ದಿನೇದಿನೇ ಕಡಿಮೆ ಆಗುತ್ತಿದೆ. ರಾಜಕಾರಣದಲ್ಲಿ ಯಾವುದು ಕೂಡ ಶಾಶ್ವತ ಅಲ್ಲ ಎಂದು ಪ್ರತ್ಯುತ್ತರ ನೀಡಿದರು. ಗೆದ್ದಾಗ ಸಂತಸ; ಸೋತಾಗ ದುಃಖ ಪಡುವುದಲ್ಲ ಎಂದು ತಿಳಿಸಿದರು.
ವಾಲ್ಮೀಕಿ ನಿಗಮದ 187 ಕೋಟಿಯನ್ನು ಬಳಸಿಕೊಂಡು ಗೆದ್ದಿದ್ದೀರಿ. ಇದು ನನಗೆ ಮೋಸ ಮಾಡಿ ಗೆದ್ದಂತೆ ಅಲ್ಲವೇ ಎಂದು ಪ್ರಶ್ನಿಸಿದರು. ಸೋತವರನ್ನು ಗೇಲಿ ಮಾಡದಿರಿ ಎಂದು ಮನವಿ ಮಾಡಿದರು. ವಿಪಕ್ಷದಲ್ಲಿ ಇದ್ದವರು ಆಡಳಿತ ಪಕ್ಷದವರನ್ನು ತಪ್ಪು ಆದಾಗ, ಕೆಲವೊಂದು ವಿಷಯದಲ್ಲಿ ಟೀಕಿಸುತ್ತಾರೆ. ಆಡಳಿತ ಪಕ್ಷಕ್ಕೂ ತಾಳ್ಮೆ ಬೇಕು ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ವಾಲ್ಮೀಕಿ ನಿಗಮದ ಹಗರಣದ ಸಂದರ್ಭದಲ್ಲಿ ಸಾಕಷ್ಟು ರೈತರ ಖಾತೆಗೆ ಹಣ ಜಮಾ ಮಾಡಿದ್ದಾರೆ. ಅವರ ಖಾತೆ ಸ್ಥಗಿತವಾಗಿದ್ದು, ಅದರಲ್ಲಿ ವ್ಯವಹಾರ ಮಾಡಲಾಗದೆ ರೈತರು ಈಗ ಕಣ್ಣೀರು ಹಾಕುತ್ತಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.