Menu

ಎತ್ತಿನಹೊಳೆ ಯೋಜನೆಯಿಂದ 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆ: ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಗೆ ಒಟ್ಟು 23,251 ಕೋಟಿ ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇಲ್ಲಿಯವರೆಗೂ 17,147 ಕೋಟಿ ಖರ್ಚಾಗಿದೆ. ಈ ಯೋಜನೆಯಿಂದ 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಂದಿ ಗ್ರಾಮದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಮೂಲತಃ ಕುಡಿಯುವ ನೀರಿನ ಯೋಜನೆ ಆಗಿದ್ದು,  ಕೆರೆಗಳಿಗೆ ನೀರು ತುಂಬಿಸುವುದು ನಂತರದ ಆದ್ಯತೆ ಆಗಿದೆ ಎಂದರು.

24.1 TMC ನೀರಿನಲ್ಲಿ ಕುಡಿಯುವ ನೀರಿಗೆ 14 TMC ಬೇಕಾಗಿದೆ. ಆದ್ದರಿಂದ ಮೊದಲು ಕುಡಿಯುವ ನೀರನ್ನು ಕೊಡುವ ಯೋಜನೆ ಮುಗಿಸಲು ಸಂಪುಟ ಸಭೆ ತೀರ್ಮಾನ ಮಾಡಲಾಗಿದ್ದು, 2 ವರ್ಷಗಳಲ್ಲಿ ಉದ್ದೇಶಿತ ಜಿಲ್ಲೆ, ತಾಲ್ಲೂಕುಗಳಿಗೆ ನೀರು ಕೊಡ್ತೀವಿ ಎಂದರು.

9807 ಕೋಟಿ ಮೊತ್ತದಲ್ಲಿ ಗ್ರಾವಿಟಿ ಮುಖ್ಯ ಕೆನಲ್ ನ‌ ಕೆಲಸ ಶೇ.85ರಷ್ಟು ಮಗಿದಿದೆ. ಹೆಚ್ಚುವರಿಯಾಗಿ ಇದಕ್ಕೆ 8000 ಕೋಟಿ ಬೇಕಾಗಿದೆ. ಬಾಕಿ ಉಳಿದಿರುವುದು 6000 ಚಿಲ್ಲರೆ ಕೋಟಿ ಶೀಘ್ರ ಹಂಚಿಕೆ ಆಗಲಿದೆ ಎಂದು ಅವರು ಹೇಳಿದರು.

ಬೆಂಗಳೂರು ಜಿಲ್ಲೆಗಳ 31 ವಿಷಯಗಳು ಚರ್ಚೆಯಾಗಿ 2250 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗಳನ್ನೇ ಪ್ರಮುಖವಾಗಿ ಚರ್ಚಿಸಲಾಗಿದೆ ಎಂದು ಅವರು ನುಡಿದರು.

ಪ್ರತೀ ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದ್ದು ಇದಕ್ಕೆ 1125.25 ಕೋಟಿ ಮಂಜೂರು ಮಾಡಲಾಗಿದೆ. ಹಿಂದುಳಿದ ವರ್ಗದ ಅಭ್ಯರ್ಥಿಗಳು IAS, IRS, IPS ಸೇರಿ ಸ್ಪರ್ಧಾತ್ಮಕ ಪರೀಕ್ಷಾ‌ ತರಭೇತಿಗೆ 10 ಕೋಟಿ ವೆಚ್ಚದ ಎರಡು ವಸತಿ ಶಾಲೆ ಬೆಂಗಳೂರಿನಲ್ಲಿ ನಿರ್ಮಿಸಲಾಗುವುದು ಎಂದು ಅವರು ವಿವರಿಸಿದರು.

ಬೆಂಗಳೂರು ಕೇಂದ್ರ ವಿವಿಗೆ “ಡಾ.ಮನಮೋಹನ್ ಸಿಂಗ್ ಬೆಂಗಳೂರು ಸಿಟಿ ವಿವಿ” ಎಂದು ಹೆಸರಿಡಲು ತೀರ್ಮಾನಿಸಲಾಗಿದೆ. PHC ಗಳಿಲ್ಲದ ಹೊಸ ತಾಲ್ಲೂಕುಗಳಲ್ಲಿ CHC ಗಳನ್ನು ಆರಂಭಿಸಲು ತೀರ್ಮಾನ ಮಾಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ “ಬೆಂಗಳೂರು ಉತ್ತರ ತಾಲ್ಲೂಕು” ಎಂದು ಬಾಗೇಪಲ್ಲಿಗೆ “ಭಾಗ್ಯನಗರ” ಎಂದು ಹೆಸರಿಡಲಾಗುವುದು ಎಂದು ಅವರು ನುಡಿದರು.

ನಾವು ಆಡಳಿತವನ್ನು  ಬೆಂಗಳೂರು ಕೇಂದ್ರಿತ ಎಂಬುದನ್ನು  ತಪ್ಪಿಸಿ  ವಿಕೇಂದ್ರೀಕರಣ ಮಾಡುವುದಕ್ಕಾಗಿಯೆ ಆಯಾ ಭಾಗದ ಸಮಸ್ಯೆಗಳ ಮೇಲೆ ಗಮನ ಹರಿಸಿ ಅವುಗಳಿಗೆ ಚಿಕಿತ್ಸಕ ಪರಿಹಾರ ನೀಡುವ ಉದ್ದೇಶದಿಂದ ಸಚಿವ ಸಂಪುಟ ಸಭೆಗಳನ್ನು  ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ  ನಡೆಸುತ್ತಿದ್ದೇವೆ. ಮೊದಲಿಗೆ ಕಲ್ಬುರ್ಗಿಯಲ್ಲಿ, ಆ ನಂತರ ಮಲೈ ಮಹದೇಶ್ವರ ಬೆಟ್ಟದಲ್ಲಿ ಸಭೆ ನಡೆಸಿದ್ದೆವು. ಮೂರನೆಯದಾಗಿ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಸಚಿವ ಸಂಪುಟ ಸಭೆಯಲ್ಲಿ ನಾವು 3400 ಕೋಟಿ ರೂಗಳಿಗೆ ಅನುಮೋದನೆ ನೀಡಿದ್ದೇವೆ. ಈ ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ನೀರಾವರಿ, ಪ್ರವಾಸೋದ್ಯಮ, ರಸ್ತೆ- ಸೇತುವೆ ಮುಂತಾದ ವಿಷಯಗಳಿಗೆ ಆದ್ಯತೆ ನೀಡಿ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

Related Posts

Leave a Reply

Your email address will not be published. Required fields are marked *