ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ನಾಮಕರ ಮಾಡಿದ್ದ ರಾಜ್ಯ ಸರ್ಕಾರ ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ಎಂದು ಪುನರ್ನಾಮರಣ ಮಾಡಲು ತೀರ್ಮಾನಿಸಿದೆ.
ಚಿಕ್ಕಬಳ್ಳಾಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ಹಾಗೂ ಬಾಗೇಪಲ್ಲಿ ತಾಲೂಕನ್ನು ಭಾಗ್ಯನಗರ ಎಂದು ಪುನರ್ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ.
ತುಮಕೂರು ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರಿಸಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿ ಕೆಲವರು ಒತ್ತಾಯಿಸಿದ್ದರು. ಆದರೆ, ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಹೆಸರು ಬದಲಾಯಿಸಲು ತೀರ್ಮಾನಿಸಿತು.
1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕವಾಗಿ ಬೆಂಗಳೂರು ಗ್ರಾಮಾಂತ ಎಂದು ಹೊಸ ಜಿಲ್ಲೆಯಾಗಿ ರೂಪುಗೊಂಡಿತ್ತು. ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಳ, ರಾಂನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ತಾಲೂಕು ಒಳಗೊಂಡು ಪ್ರತ್ಯೇಕ ಜಿಲ್ಲೆ ಅಸ್ತಿತ್ವಕ್ಕೆ ಬಂದಿತ್ತು. ಆದ್ರೆ, 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮತ್ತೆ ರಾಮನಗರ ಜಿಲ್ಲೆಯಾಗಿ ವಿಭಜಿಸಲಾಗಿತ್ತು. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಬರುವ ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ ಒಳಗೊಂಡಿದ್ದು, ಇದುವರೆಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಯಾವುದೇ ಜಿಲ್ಲಾ ಕೇಂದ್ರ ಇಲ್ಲ. ಹೀಗಾಗಿ ಜಿಲ್ಲಾ ಕೇಂದ್ರವೇ ಇಲ್ಲದ ರಾಜ್ಯದ ಏಕೈಕ ಜಿಲ್ಲೆ ಬೆಂಗಳೂರು ಗ್ರಾಮಾಂತರ ಎನಿಸಿಕೊಂಡಿದೆ.
ವ್ಯಾಪಕ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಲಾಗಿತ್ತು. ಬೆಂಗಳೂರಿನ ಬ್ರ್ಯಾಂಡ್ ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮಜಾಯಿಷಿ ನೀಡಿದ್ದರು. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ’ಬೆಂಗಳೂರು ಉತ್ತರ’ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಏನು ಕಾರಣ ಕೊಡಲಾಗಿತ್ತೋ, ಇಲ್ಲೂ ಅದೇ ಕಾರಣವನ್ನು ನೀಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಬಾಗೇಪಲ್ಲಿಯ ಹೆಸರನ್ನೂ ಬದಲಾಯಿಸಲು ಸ್ಥಳೀಯ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಬಾಗೇಪಲ್ಲಿಯ ಹೆಸರು ’ಭಾಗ್ಯನಗರ’ ಎಂದು ಬದಲಾವಣೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೀಗ ಈ ಪ್ರಸ್ತಾವನೆಗೂ ಸಹ ಇಂದಿನ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಬಾಗೇಪಲ್ಲಿ ಇನ್ಮುಂದೆ ’ಭಾಗ್ಯನಗರ’ ಎಂದು ಬದಲಾಗಲಿದೆ.