ನವದೆಹಲಿಯ ಕಂಪೆನಿಯೊಂದು ಒಂಬತ್ತು ದಿನ ದೀಪಾವಳಿ ರಜೆ ನೀಡಿದ್ದು ಉದ್ಯೋಗಿಗಳ ಹೃದಯವನ್ನು ಗೆದ್ದುಕೊಂಡಿದೆ. ಉದ್ಯೋಗಿ ಸ್ನೇಹಿ ಎಲೈಟ್ ಮಾರ್ಕ್ಯೂ ಕಂಪೆನಿ ಈ ಘೋಷಣೆ ಮಾಡಿದೆ.
ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಆರಂಭಗೊಂಡಿದ್ದು, ಕೆಲವು ಕಂಪೆನಿಗಳು ತಿಂಗಳ ಸಂಬಳದ ಮೊತ್ತವನ್ನು ಬೋನಸ್ ಆಗಿ ಉದ್ಯೋಗಿಗಳಿಗೆ ನೀಡುತ್ತಿವೆ. ಮತ್ತೆ ಕೆಲವು ಕಂಪೆನಿಗಳು ಸ್ವೀಟ್ ಮತ್ತು ಪಟಾಕಿ ಬಾಕ್ಸ್‌ಗಳನ್ನು, ದೀಪಗಳನ್ನು ಉಡುಗೊರೆ ನೀಡುತ್ತಿವೆ. ಬೆಋಳೆಣಿಕೆಯ ಕಂಪೆನಿಗಳು ಉದ್ಯೋಗಿಗಳಿಗೆ ಬೃಹತ್ ದೀಪಾವಳಿ ಉಡುಗೊರೆಗಳನ್ನೂ ನೀಡುವುದೂ ಇದೆ. ಎಲೈಟ್ ಮಾರ್ಕ್ಯೂ ಮಾತ್ರ ಅಕ್ಟೋಬರ್ 18 ರಿಂದ 26ರ ವರೆಗೆ ಒಂಬತ್ತು ದಿನಗಳ ರಜೆ ನೀಡಿ ಗಮನ ಸೆಳೆದಿದೆ.
ನಗರ ಪ್ರದೇಶದಲ್ಲಿ ಉದ್ಯೋಗ ಮಾಡುತ್ತಿರುವವರು ಹಬ್ಬ ಆಚರಿಸಲು ಊರಿಗೆ ಮರಳುತ್ತಿದ್ದಾರೆ. ಹಬ್ಬದ ಸರ್ಕಾರಿ ರಜೆ ಹೊರತುಪಡಿಸಿ ಸಿಕ್ ಲೀವ್, ಕ್ಯಾಶ್ಯುವಲ್ ಲೀವ್ ಸೇರಿದಂತೆ ಎಲ್ಲಾ ರಜೆಗಳನ್ನು ಲೆಕ್ಕ ಹಾಕಿ ಅರ್ಜಿ ಸಲ್ಲಿಸುತ್ತಿದ್ದಾರೆ. ಕೆಲವರಿಗೆ ರಜೆ ಸಿಕ್ಕರೆ, ಮತ್ತೆ ಕೆಲವರಿಗೆ ರಜೆ ಸಿಗದೆ ಬೇಸರದಲ್ಲಿದ್ದಾರೆ.
ಎಲೈಟ್ ಮಾರ್ಕ್ಯೂ ಕಚೇರಿಗೆ ಎಂದಿನಂತೆ ಹಾಜರಾದ ಉದ್ಯೋಗಿಗಳಿಗೆ ಸಿಇಒ ರಜತ್ ಗ್ರೋವರ್ ಇಮೇಲ್ ಮೂಲಕ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇಮೇಲ್ ಓದಿದ ಉದ್ಯೋಗಿಗಳ ಸಂಭ್ರಮ ಹೆಚ್ಚಿದೆ. ರಜತ್ ಗ್ರೋವರ್, ದೀಪಾವಳಿಗೆ 9 ದಿನ ರಜೆ ಘೋಷಿಸಿ ಕುಟುಂಬದ ಜೊತೆ ಹಬ್ಬ ಆಚರಿಸಿ ಎಂದು ಸೂಚಿಸಿದ್ದಾರೆ.
9 ದಿನದ ದೀಪಾವಳಿ ರಜೆಯನ್ನು ಕುಟುಂಬದ ಜೊತೆ ಸಂತೋಷವಾಗಿ ಕಳೆಯಿರಿ, ಬೇಕಾದಷ್ಟು ಸಿಹಿ ತಿನ್ನಿ, ಹಬ್ಬದ ಊಟ ಮಾಡಿ, ಅಪ್ಪಿ ತಪ್ಪಿಯೂ ಕಚೇರಿಯ ಇಮೇಲ್ ಒಪನ್ ಮಾಡಬೇಡಿ, ಝೊಮ್ಯಾಟೊ, ಅಮೆಜಾನ್ ಇಮೇಲ್ ಹೊರತುಪಡಿಸಿ ಇತರ ಇಮೇಲ್ ನೋಡಬೇಡಿ. ಕಚೇರಿ ಕಡೆ ತಲೆ ಹಾಕಬೇಡಿ ಎಂದು ರಜತ್ ಗ್ರೋವರ್ ಇಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದು ಸಂಪೂರ್ಣ ದೀಪಾವಳಿ ರಜೆ. ಈ ರಜೆಯಿಂದ ಇತರ ರಜೆಗಳಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ರಜೆ ಬಳಿಕ ಅದೇ ಖುಷಿಯಿಂದ ಕಚೇರಿಯಲ್ಲಿ ಮತ್ತೆ ಅದೇ ಉತ್ಸಾಹದಿಂದ ಕೆಲಸ ಮಾಡೋಣ ಎಂದು ಇಮೇಲ್ ಮೂಲಕ ಹೇಳಿದ್ದಾರೆ. ಕಂಪನಿಯ ಈ ನಿರ್ಧಾರ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.