ಭಾರೀ ಮಳೆಯಿಂದಾಗಿ ಪ್ರವಾಹ, ಭೂಕುಸಿತಗಳಿಗೆ 51 ಮಂದಿ ಮೃತಪಟ್ಟಿದ್ದು, 22 ಮಂದಿ ನಾಪತ್ತೆಯಾಗಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದೆ.
ಜೂನ್ 20ರಿಂದ ಜುಲೈ 1ರವರೆಗೆ ಮುಂಗಾರು ಮಳೆಯ ಅಬ್ಬರದಿಂದ ಹಿಮಾಚಲ ಪ್ರದೇಶದ 12 ಜಿಲ್ಲೆಗಳು ತತ್ತರಿಸುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಅಲ್ಲದೇ ಸಾಕಷ್ಟು ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗಿದ್ದು ಮೂಲಭೂತ ಸೌಕರ್ಯಗಳು ಹಾನಿ ಆಗಿವೆ.
ಮಂಡಿ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಗರಿಷ್ಠ 10 ಮಂದಿ ಮೃತಪಟ್ಟಿದ್ದು, 34 ಮಂದಿ ನಾಪತ್ತೆಯಾಗಿದ್ದಾರೆ. ಮಳೆಯಿಂದ 103 ಮಂದಿ ಗಾಯಗೊಂಡಿದ್ದಾರೆ.
ಭಾರೀ ಮಳೆಯಿಂದ ಪ್ರವಾಹ, ನೀರಿನಲ್ಲಿ ಮುಳುಗಡೆ, ಭೂಕುಸಿತ, ಸಿಡಿಲು ಬಡಿದು, ರಸ್ತೆ ಅಪಘಾತ ಸೇರಿದಂತೆ ನಾನಾ ಕಾರಣಗಳಿಂದ 51 ಮಂದಿ ಅಸುನೀಗಿದ್ದಾರೆ. 22 ಮಂದಿ ನಾಪತ್ತೆಯಾಗಿದ್ದಾರೆ.
204 ಮನೆಗಳು ಹಾನಿಯಾಗಿದ್ದು, ಇದರಿಂದ 22 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. 84 ಅಂಗಡಿಗಳು, ಗೋಶಾಲೆ, ಕಾರ್ಮಿಕರ ಶಿಬಿರಗಳು ನಾಶವಾಗಿದ್ದು, ಅಂದಾಜು 89 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.
283.39 ಕೋಟಿ ರೂ. ಮೌಲ್ಯದ ರಸ್ತೆ, ನೀರು ಮುಂತಾದ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿವೆ. ಲೋಕೋಪಯೋಗಿ ಇಲಾಖೆಗೆ ಅತೀ ಹೆಚ್ಚು ನಷ್ಟ ಉಂಟಾಗಿದ್ದು, ಜಲ ಶಕ್ತಿ ಮತ್ತು ವಿದ್ಯುತ್ ಇಲಾಖೆಗಳಿಗೆ ಭಾರೀ ನಷ್ಟವಾಗಿವೆ.