ಚಾಮರಾಜನಗರ: ವಿಷ ಹಾಕಿ 20ಕ್ಕೂ ಹೆಚ್ಚು ಕೋತಿಗಳನ್ನು ಕೊಂದು ಶವಗಳನ್ನು ಮೂಟೆ ಕಟ್ಟಿ ರಸ್ತೆ ಬದಿ ದುಷ್ಕರ್ಮಿಗಳು ಎಸೆದು ಹೋದ ಆಘಾತಕಾರಿ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಕೊಡಸೋಗೆ ರಸ್ತೆ ಬದಿಯಲ್ಲಿ ಎರಡು ಗೋಣಿ ಚೀಲದಲ್ಲಿ ಕೋತಿಗಳ ಶವಗಳನ್ನು ತುಂಬಿ ಎಸೆಯಲಾಗಿದ್ದು, ಇದರಲ್ಲಿ ಎರಡು ಕೋತಿಗಳು ಅಸ್ವಸ್ಥ ಸ್ಥಿತಿಯಲ್ಲಿದ್ದು ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿವೆ.
ದುಷ್ಕರ್ಮಿಗಳು ಕೋತಿಗಳಿಗೆ ವಿಷ ಹಾಕಿ ಕೊಂದು ಗೋಣಿಚೀಲದಲ್ಲಿ ತುಂಬಿ ಎಸೆದಿದ್ದಾರೆ. ಕೋತಿಗಳ ದೇಹಗಳು ನೀಲಿ ಬಣ್ಣಕ್ಕೆ ತಿರುಗಿವೆ.
ಜೀವನ್ಮರಣ ಹೋರಾಟ ನಡೆಸುತ್ತಿದ್ದ 2 ಕೋತಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಪಶು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿವೆ ಎಂದು ಹೇಳಲಾಗಿದೆ.
ಅರಣ್ಯ ಸಿಬ್ಬಂದಿ ಹಾಗೂ ಬಂಡೀಪುರ ಅರಣ್ಯ ಇಲಾಖೆಯ ಶ್ವಾನದಳವು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಕೋತಿಗಳ ಮೃತದೇಹಗಳು ಸಿಕ್ಕ ಪ್ರದೇಶವು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದ ವ್ಯಾಪ್ತಿಗೆ ಬರುತ್ತದೆ.
ಇತ್ತೀಚೆಗೆ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳ ಹತ್ಯೆ ಮಾಡಿದ ಘಟನೆ ಬೆನ್ನಲ್ಲೇ ಇದೀಗ ಕೋತಿಗಳನ್ನು ಸಾಮೂಹಿಕವಾಗಿ ವಿಷಹಾಕಿ ಕೊಲೆ ಮಾಡಲಾಗಿದೆ.
ವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಮೃತಪಟ್ಟ ಕೋತಿಗಳ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.