Menu

ಸರ್ಕಾರಕ್ಕೆ 150 ಕೋಟಿ ವಂಚನೆ ಆರೋಪ: ಕೆಎಎಸ್‌ ಅಧಿಕಾರಿ ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್‌ ಕೇಸ್‌

ಅರೆ ನ್ಯಾಯಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ದೋಷಪೂರಿತ ಆದೇಶಗಳನ್ನು ಹೊರಡಿಸಿರುವ ಆರೋಪದಡಿ ಬೆಂಗಳೂರು ದಕ್ಷಿಣ ಉಪ ವಿಭಾಗದ ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರುಗಿಸುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.

ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಜೂನ್‌ 30ರಂದು ಈ ಸಂಬಂಧ ಪತ್ರ ಬರೆಯಲಾಗಿದ್ದು, ಅಪೂರ್ವ ಬಿದರಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ತುರ್ತಾಗಿ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಅಪೂರ್ವ ಬಿದರಿ ಬೆಂಗಳೂರು ದಕ್ಷಿಣ ಉಪ ವಿಭಾಗದ ಉಪ ವಿಭಾಗಾಧಿಕಾರಿಯಾಗಿ ಈವರೆಗೆ ಹೊರಡಿಸಿರುವ ಅರೆ ನ್ಯಾಯಿಕ ಪ್ರಕರಣಗಳ ಆದೇಶಗಳನ್ನು ಪರಿಶೀಲಿಸಲು ತಂಡ ರಚಿಸಲಾಗಿತ್ತು. ಅಪೂರ್ವ ಬಿದರಿ 53 ಅರೆ ನ್ಯಾಯಿಕ ಪ್ರಕರಣಗಳನ್ನು ನಿರ್ಧರಿಸುವಲ್ಲಿ ಗಂಭೀರ ಕರ್ತವ್ಯ ಲೋಪ ಎಸಗಿರುವುದಾಗಿ ತಂಡ ಪತ್ತೆ ಮಾಡಿದೆ. ಇದರಿಂದ ಸರ್ಕಾರಕ್ಕೆ ೧೫೦ ಕೋಟಿ ರೂ. ವಂಚಿಸಿದ್ದಾರೆ ಎನ್ನಲಾಗಿದೆ.

ಅಪೂರ್ವ ಬಿದರಿ ವಿರುದ್ಧ ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಸೆಕ್ಷನ್‌ 35 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 257ರ ಅಡಿ ಶಿಸ್ತುಕ್ರಮಕ್ಕೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಸರಕಾರ ಈ ಪ್ರಸ್ತಾವನೆ ಪರಿಶೀಲಿಸಿ, ಅಪೂರ್ವ ಬಿದರಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಿರ್ದೇಶನ ನೀಡಿದೆ.

Related Posts

Leave a Reply

Your email address will not be published. Required fields are marked *