ಚಿಕ್ಕಬಳ್ಳಾಪುರದ ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯ ಯುವತಿ ಸ್ವರ್ಣ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಹಾಸ್ಟೆಲ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮನೆಗೆ ಬಂದಿದ್ದ ಸ್ವರ್ಣರನ್ನು ತಾಯಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಸ್ವರ್ಣರ ತಂದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು. ಅಂದಿನಿಂದಲೂ ಮಗಳು ಸ್ವರ್ಣ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಆತ್ಮಹತ್ಯೆ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ ಠಾಣೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.
ಪ್ರೇಯಸಿಗೆ ಒಡವೆ ಮಾಡಿಸಲು ಕಳವು: ಆರೋಪಿ ಸೆರೆ
ಪ್ರೇಯಸಿಗೆ ಒಡವೆ ಮಾಡಿಸಿಕೊಡಲು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗಟ್ಟಳ್ಳಿಯಲ್ಲಿ ಪರಿಚಿತನ ಮನೆಯ ಬೀಗ ಮುರಿದು ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಶ್ರೇಯಸ್(22) ಬಂಧಿತ.
ಆರೋಪಿ ಶ್ರೇಯಸ್ ನಾಲ್ಕು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿ ಒಡವೆ ಕೊಡಿಸುವಂತೆ ಪೀಡಿಸುತ್ತಿದ್ದಳಂತೆ. ಈತ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಚಿಕನ್ ಅಂಗಡಿ ಇಟ್ಟುಕೊಂಡಿದ್ದ ಹರೀಶ್ ಎಂಬವರ ಮನೆಯಲ್ಲಿ ಬಂಗಾರ ಇರುವುದು ಗೊತ್ತಾಗಿ ಪ್ರೇಯಸಿಗಾಗಿ ಕಳ್ಳತನಕ್ಕೆ ಪ್ಲಾನ್ ಮಾಡಿದ್ದ. ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಮಾರಾಟ ಮಾಡಿ ಪ್ರೇಯಸಿಗೆ ಒಡವೆ ಮಾಡಿಸಿಕೊಟ್ಟಿದ್ದ.
ಹರೀಶ್ ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣ ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ಶ್ರೇಯಸ್ ಕಳ್ಳತನ ಮಾಡಿರುವುದು ಬಯಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ ಹೆಬ್ಬಗೋಡಿ ಪೊಲೀಸರು, 416 ಗ್ರಾಂ ಚಿನ್ನ, 3 ಲಕ್ಷದ 46 ಸಾವಿರ ರೂ. ವಶಕ್ಕೆ ಪಡೆದಿದ್ದಾರೆ.