ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ನಾಗರಿಕರಿಗೆ ಸ್ಪಂದಿಸುವ ಉದ್ದೇಶದಿಂದ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ “ಬೆಂಗಳೂರು ನಡಿಗೆ” ಕಾರ್ಯಕ್ರಮದಡಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಗೊಳಪಡುವ ಮತ್ತಿಕೆರೆಯ ಜಯಪ್ರಕಾಶ್ ನಾರಾಯಣ್ ಉದ್ಯಾನವನದಲ್ಲಿ ನಾಗರಿಕರ ಜೊತೆ ನಡಿಗೆಯಲ್ಲಿ ಪಾಲ್ಗೊಂಡರು.
ಉದ್ಯಾನದಲ್ಲಿ ಜನಸಾಮಾನ್ಯರ ಜತೆ ಹೆಜ್ಜೆ ಹಾಕಿದ ಡಿಸಿಎಂ, ಸಾರ್ವಜನಿಕರ ಅಹವಾಲು ಆಲಿಸಿ ಸಲಹೆಗಳನ್ನು ಪಡೆದರು. ಸಂವಾದ ನಡೆಸಿದ ಅವರು ಸಮಸ್ಯೆಗಳ ಪರಿಹಾರದ ಭರವಸೆ ನೀಡಿದರು.
ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ಮಾಜಿ ಕಾರ್ಪೊರೇಟರ್ ನಂಜುಂಡಪ್ಪ, ಅಪರ ಆಯುಕ್ತರಾದ ಲತಾ, ಜಂಟಿ ಆಯುಕ್ತರಾದ ಮೊಮಿನ್, ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಸಿಇಒ ಕರೀಗೌಡ ಮತ್ತಿತರರು ಉಪಸ್ಥಿತರಿದ್ದರು.
ನನಗೆ ಆಹ್ವಾನವಿಲ್ಲವೆಂದು ಶಾಸಕ ಮುನಿರತ್ನ ಕಿರಿಕ್
ಡಿಕೆ ಶಿವಕುಮಾರ್ ಪಾರ್ಕ್‌ನಲ್ಲಿ ಮಾತನಾಡುತ್ತಿರಬೇಕಾದರೆ ಬಂದ ಶಾಸಕ ಮುನಿರತ್ನ ಅವರು, ಮೈಕ್ ಕೊಡಿ ಒಂದು ನಿಮಿಷ ಎಂದರು, ಮೈಕ್ ತಗೊಂಡು ಈ ಕಾರ್ಯಕ್ರಮಕ್ಕೆ ನಂಗೆ ಆಹ್ವಾನವಿಲ್ಲ, ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಬಂದಿದ್ದೇನೆ ಎಂದರು. ಆಗ ಡಿಸಿಎಂ, ಸಂತೋಷ ಕುಳಿತುಕೊಳ್ಳಿ ಎಂದರು, ಮತ್ತೆ ಮಧ್ಯೆ ಪ್ರವೇಶ ಮಾಡಿದ ಮುನಿರತ್ನ , ಒಂದು ಎಂಪಿ, ಶಾಸಕರ ಪೋಟೋ ಇಲ್ಲ, ಇದು ಸಾರ್ವಜನಿಕ ಕುಂದು ಕೊರತೆ ನೀಗಿಸುವ ಕಾರ್ಯಕ್ರಮವಲ್ಲ, ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎಂದರು.
ಈ ವೇಳೆ ಬೆಂಬಲಿಗರು, ಕಾರ್ಯಕರ್ತರು ಗಲಾಟೆ ಮಾಡಿದಾಗ ಶಿವಕುಮಾರ್ ಮೈಕ್ ಮೈಕ್ ಕಿತ್ತುಕೊಳ್ಳಲು ಹೇಳಿದ್ದಾರೆ. ಆಗ ಬೆಂಬಲಿಗರು ಮುನಿರತ್ನ ವಿರುದ್ಧ ರೇಪಿಸ್ಟ್ ರೇಪಿಸ್ಟ್ ಎಂದು ಘೋಷಣೆ ಕೂಗಿದರು.
ನನ್ನ ಮೇಲೆ ಹಲ್ಲೆ ಮಾಡೋಕೆ ರಾಮನಗರ, ಚನ್ನಪಟ್ಟಣದಿಂದ ರೌಡಿಗಳನ್ನ ಕರೆಸಿದ್ರು , ನನ್ನ ಕ್ಷೇತ್ರದಲ್ಲಿ ನನಗೆ ಆಹ್ವಾನ ಕೊಡದೇ ಕಾರ್ಯಕ್ರಮ ಮಾಡ್ತಿದ್ದಾರೆ, ಬರೀ ಕಾಂಗ್ರೆಸ್ ಫ್ಲೆಕ್ಸ್ ಹಾಕಿದ್ದಾರೆ, ನಾನು ರಾಜೀನಾಮೆ ಕೊಡಬೇಕು ಅನ್ನೋದು ಅವರ ಟಾರ್ಗೆಟ್, ಅವರ ಜೊತೆ ಬೆಳಗ್ಗೆಯಿಂದ ಯಾರಿದ್ರೂ ಅವರನ್ನ ಈ ಕ್ಷೇತ್ರಕ್ಕೆ ತರೋ ಪ್ಲಾನ್ ಇದೆ. ಪರೋಕ್ಷವಾಗಿ ಕುಸುಮಗೆ ಸಪೋರ್ಟ್ ಕೊಡಲಾಗ್ತಿದೆ ಎಂದು ಮುನಿರತ್ನ ಕಿಡಿ ಕಾರಿದ್ದಾರೆ.
ಇವತ್ತು ಪೊಲೀಸ್ ಇಲ್ಲ ಅಂದಿದ್ರೆ ನನ್ನ ಇಲ್ಲೇ ಕೊಲೆ ಮಾಡ್ತಿದ್ರು, ಸಿದ್ದರಾಮಯ್ಯ ಒಂದು ಸಾರಿ ಶಾಸಕರಿಗೆ ಆಹ್ವಾನ ಕೊಡಿ ಅಂತಾ ಕಳಿಸಿದ್ರು, ಈಗ ಡಿಸಿಎಂ ಅಹ್ವಾನ ಕೊಡೋದಿರಲಿ ಗೌರವವನ್ನೂ ಕೊಟ್ಟಿಲ್ಲ, ಸಿಎಂ ಸಿದ್ದರಾಮಯ್ಯ ಮೊದಲು ಖಡಕ್ ಆಗಿ ಇದ್ರೂ ಈಗ ಸಿಎಂ ಬದಲಾಗಿಬಿಟ್ಟಿದ್ದಾರೆ. ಡಿಸಿಎಂ ಅವರ ತಮ್ಮನನ್ನ ಸೋಲಿಸಿದ್ದಕ್ಕೆ ದ್ವೇಷ ತೀರಿಸೋಕೆ ರಾಜಕಾರಣ ಮಾಡ್ತಿದ್ದಾರೆ. ಈಗ ರೌಂಡ್ಸ್ ಮಾಡ್ತಿರೋದು ಮುಂದಿನ ಚುನಾವಣೆಯ ಟಾರ್ಗೆಟ್ ಹೊರತು ಜನರಿಗಾಗಿ ಅಲ್ಲ. ಇದೆಲ್ಲ ಜಿಬಿಎ ಚುನಾವಣೆಗೆ ಗಿಮಿಕ್ ಎಂದು ಟೀಕಿಸಿದರು.
ಪೊಲೀಸ್ ಇಲಾಖೆಯಲ್ಲಿ ಸೀಟ್ ಗಳು ಹರಾಜಿಗಿಟ್ಟಿದ್ದಾರೆ. ಯಾರೂ ಬರ್ತಾರೋ ಅವರಿಗೆ ಕೊಡ್ತಿದ್ದಾರೆ, ಇವರು ಮಾಡ್ತಿರೋ ಪಾಪಗಳನ್ನ ದೇವರು ನೋಡ್ತಿದ್ದಾನೆ, ಇವರ ಅಧಿಕಾರ ಬಹಳ ದಿನ ನಡೆಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿರು.
.
ನಾನು RSS ಗಣವೇಷದಲ್ಲಿ ಬಂದ್ರೆ ಕರಿಟೋಪಿ MLA ಅಂತ ಕರೀತಾರೆ, ನಾನೊಬ್ಬ ಶಾಸಕ ಅಂತಾ ಕೂಡ ಗೌರವ ಕೊಡ್ತಿಲ್ಲ , ಇಲ್ಲಿ ಪಕ್ಷದ ಕಾರ್ಯಕ್ರಮ ಮಾಡ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದು, ಸರ್ಕಾರದ ದುಡ್ಡಲ್ಲಿ ಮಾಡುತ್ತಿರುವ ಕಾರ್ಯಕ್ರಮ ಇದು, ಸರ್ಕಾರಿ ಕಾರ್ಯಕ್ರಮ ಅಲ್ಲ. ಲೋಕಲ್ ಶಾಸಕ, ಸಂಸದರ ಕರೆಯದೆ ಅವಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಶಾಸಕರಿಗೆ ಗೌರವ ಕೊಡದೆ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದು ಕಾಂಗ್ರೆಸ್ ನ ಸಂಸ್ಕೃತಿ ಹಾಗೂ ಗೂಂಡಾಗಿರಿ ತೋರಿಸುತ್ತದೆ ಎಂದು ದೂರಿದ್ದಾರೆ.
ಎರಡು ವರ್ಷ ಮಾತ್ರ ಇರ್ತೀರ ಯಾಕೆ ಗೂಂಡಾಗಿರಿ ಮಾಡ್ತೀರ, ಕಾಂಗ್ರೆಸ್ ಔಟ್ ಗೋಯಿಂಗ್ ಪಾರ್ಟಿ ಅಂತ ಜನ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡೋದೆ ನಮ್ಮ ಅಜೆಂಡಾ, ಮುನಿರತ್ನ ಮೇಲೆ ಆಗಿರುವ ಹಲ್ಲೆ ಪ್ರಜಾಪ್ರಭುತ್ವದ ಮೇಲೆ ಆಗಿರುವ ಹಲ್ಲೆ. ನಾವು ಮುನಿರತ್ನ ಗೆ ಬೆಂಬಲ ಕೊಡ್ತೀವಿ, ಪೊಲೀಸರು ಅವರಿಗೆ ರಕ್ಷಣೆ ಕೊಡ್ಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.