ಬೆಂಗಳೂರು: ದೇಶದಲ್ಲಿ ಅತೀ ಹೆಚ್ಚು ಸಂಚಾರ ಉಲ್ಲಂಘನೆ ಮಾಡುವ ವಾಹನ ಸವಾರರ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ನಂ.1 ಸ್ಥಾನ ಪಡೆದಿದೆ.
ಖಾಸಗಿ ವಾಹನ ವಿಮಾ ಕಂಪನಿ ಆ್ಯಕೋ ಕಂಪನಿ 2024ರ ಡಿಸೆಂಬರ್‌ನಿಂದ 2025ರ ಜೂನ್ ತಿಂಗಳವರೆಗೆ ಸಮೀಕ್ಷೆ ನಡೆಸಿರುವ ಸಮೀಕ್ಷೆಯಲ್ಲಿ ಬೆಂಗಳೂರಿನಲ್ಲಿ ವಾಹನ ಸವಾರರು ಅತೀ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಮಾಡುವುವರು ಎಂದು ಬಹಿರಂಗವಾಗಿದೆ.
ಬೆಂಗಳೂರಿನ ವಾಹನ ಸವಾರರ ಪೈಕಿ ಶೇ. 10.8ರಷ್ಟು ವಾಹನ ಸವಾರರು 10ಕ್ಕೂ ಹೆಚ್ಚು ಸಂಖ್ಯೆಯ ಸಂಚಾರ ದಂಡ ಬಾಕಿ ಉಳಿಸಿಕೊಂಡಿದ್ದಾರೆ. ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ.
ದೇಶದಲ್ಲಿ ಒಟ್ಟಾರೆ ವಿವಿಧ ನಗರಗಳಲ್ಲಿ 14.5 ಲಕ್ಷಕ್ಕಿಂತಲೂ ಹೆಚ್ಚು ವಾಹನಗಳನ್ನು ತಪಾಸಣೆಗೊಳಪಡಿಸಲಾಗಿದ್ದು, ಸುಮಾರು ಶೇ. 61ರಷ್ಟು ಮಂದಿ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡಕ್ಕೆ ಒಳಗಾಗಿದ್ದಾರೆ. ಪ್ರತಿ 10 ಜನರಿಗೆ ಸುಮಾರು 6 ಮಂದಿ ಕನಿಷ್ಠ ಒಂದು ಸಂಚಾರ ದಂಡ ಪಾವತಿಸಬೇಕಾಗಿದ್ದು, ಹೆಲ್ಮೆಟ್ ಇಲ್ಲದೇ ಸಂಚರಿಸಿದ ದ್ವಿಚಕ್ರ ವಾಹನ ಸವಾರರ ಸಂಖ್ಯೆ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ 1.56 ಲಕ್ಷ ವಾಹನ ಸವಾರರು 10ಕ್ಕೂ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿದ್ದು, ಇದು ಇತರ ಮಹಾನಗರಗಳಿಗೆ ಹೋಲಿಸಿದರೆ ಅತಿ ಹೆಚ್ಚು. ಬೆಂಗಳೂರಿನ ವಾಹನ ಸವಾರರು ತಿಂಗಳಿಗೆ ಸರಾಸರಿ 4.12 ಬಾರಿ ತಮ್ಮ ಚಲನ್ ಪರಿಶೀಲಿಸುತ್ತಾರೆ. ಚೆನ್ನೈ (5.02) ಮೊದಲ ಸ್ಥಾನದಲ್ಲಿದೆ.
ಡಿಜಿಟಲ್ ದಂಡದಲ್ಲೂ ಮುಂಚೂಣಿ
ಸಿಸಿಟಿವಿ ದೃಶ್ಯ ಹಾಗೂ ಮೊಬೈಲ್ ಆಧರಿಸಿ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ದಾಖಲಾಗುವ ಪ್ರಕರಣಗಳ ವಿಭಾಗದಲ್ಲೂ ಬೆಂಗಳೂರು ಪೊಲೀಸರು ಅಗ್ರಸ್ಥಾನದಲ್ಲಿದ್ದಾರೆ. ಶೇ. 23ರಷ್ಟು ದಂಡವನ್ನು ಕ್ಯಾಮೆರಾಗಳು ಮತ್ತು ಮೊಬೈಲ್ ಸಾಧನಗಳ ಮೂಲಕ ದಾಖಲಿಸಲಾಗಿದೆ.
ಪದೇಪದೆ ಸಂಚಾರಿ ನಿಯಮ ಉಲ್ಲಂಘನೆ
ಬೆಂಗಳೂರಿನ (ಸುಮಾರು 11%) ವಾಹನ ಸವಾರರು ಪದೇ ಪದೇ ಸಂಚಾರ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ನಂತರದ ಸ್ಥಾನದಲ್ಲಿ ಚೆನ್ನೈ (8%), ದೆಹಲಿ (6%), ಮುಂಬೈ (5%) ಮತ್ತು ಪುಣೆ (3%) ನಗರಗಳಿವೆ.
ದೆಹಲಿಯಲ್ಲಿ ಅತಿ ಹೆಚ್ಚು ದಂಡ ದಾಖಲಾಗಿದ್ದು, ಶೇ.73ರಷ್ಟು ಬಳಕೆದಾರರು ಕನಿಷ್ಠ ಒಂದು ದಂಡ ಹೊಂದಿದ್ದರೆ, ನಂತರದ ಸ್ಥಾನಗಳಲ್ಲಿ ಚೆನ್ನೈ (ಶೇ. 64) ಮತ್ತು ಮುಂಬೈ (ಶೇ. 62) ಇವೆ.