Menu

ಐಪಿಎಸ್‌ ಅಧಿಕಾರಿ ಆತ್ಮಹತ್ಯೆ: ಹರಿಯಾಣದ ಇಬ್ಬರು ಪೊಲೀಸ್‌ ಮುಖ್ಯಸ್ಥರ ವಿರುದ್ಧ ಎಫ್‌ ಐಆರ್!

ips officer

ಐಪಿಎಸ್‌ ಅಧಿಕಾರಿ ಪೂರನ್‌ ಕುಮಾರ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಹರಿಯಾಣ ಪೊಲೀಸ್‌ ಮುಖ್ಯಸ್ಥ ಶತ್ರುಜೀತ್‌ ಸಿಂಗ್‌ ಕಪೂರ್, ರೋಹ್ಟಕ್‌ ಪೊಲೀಸ್ ಆಯುಕ್ತ ನರೇಂದ್ರ ಬಿಜರಾನಿಯಾ ಸೇರಿದಂತೆ ಹಲವು ಪೊಲೀಸ್‌ ಅಧಿಕಾರಿಗಳ ವಿರುದ್ಧ ಎಫ್‌ ಐಆರ್‌ ದಾಖಲಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದ ಐಪಿಎಸ್‌ ಅಧಿಕಾರಿ ಪೂರನ್‌ ಕುಮಾರ್‌ ಚಂಡೀಗಢದ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮುನ್ನ ೮ ಪುಟಗಳ ಸುದೀರ್ಘ ಡೆತ್‌ ನೋಟ್‌ ನಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳು ವ್ಯವಸ್ಥಿತವಾಗಿ ಸಾರ್ವಜನಿಕವಾಗಿ ಹಾಗೂ ಇತರೆ ಸಂದರ್ಭಗಳಲ್ಲಿ ಸತತವಾಗಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಡೆತ್‌ ನೋಟ್‌ ಪತ್ತೆಯಾದ ನಂತರವೂ ಪೊಲೀಸರು ಎಫ್‌ ಐಆರ್‌ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಜಪಾನ್‌ ನಲ್ಲಿದ್ದ ಐಎಎಸ್‌ ಅಧಿಕಾರಿ ಪತ್ನಿ ಅಮನೀತ್‌ ಕೌರ್ ಸ್ವದೇಶಕ್ಕೆ ಮರಳಿದ ಬೆನ್ನಲ್ಲೇ ಸಿಎಂಗೆ ಪತ್ರ ಬರೆದು ಎಫ್‌ ಐಆರ್‌ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಬಗ್ಗೆ ಪ್ರಶ್ನಿಸಿದ್ದರು. ಈ ವಿಷಯ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಹಿರಿಯ ಅಧಿಕಾರಿಗಳು ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾತಿ ನಿಂದನೆ ಸೆಕ್ಷನ್‌ ಅಡಿ ಎಫ್‌ ಐಆರ್‌ ದಾಖಲಿಸಿಕೊಂಡಿದ್ದಾರೆ.

ಪೂರನ್‌ ಕುಮಾರ್‌ ಅವರ ಪತ್ನಿ ಅಮನೀತ್‌ ಕೌರ್‌ ತನ್ನ ಗಂಡನ ವಿರುದ್ಧ ಜಾತಿ ನಿಂದನೆ ಮಾಡಿ ಅಪಮಾನ ಮಾಡಿ ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಹಿರಿಯ ಇಬ್ಬರು ಪೊಲೀಸ್‌ ಅಧಿಕಾರಿಗಳ ಹೆಸರು ಉಲ್ಲೇಖಿಸಿ ದೂರು ನೀಡಿದ ನಂತರ ಎಫ್‌ ಐಆರ್‌ ದಾಖಲಾಗಿದೆ.

ಹರಿಯಾಣ ಸರ್ಕಾರದಲ್ಲಿ ಫಾರಿನ್ ಕಾರ್ಪೊರೇಷನ್‌ ವಿಭಾಗದ ಐಎಎಸ್‌ ಅಧಿಕಾರಿ ಆಗಿರುವ ಅಮನೀತ್‌ ಕೌರ್‌ ಪತಿ ಸಾವಿನ ಸಂದರ್ಭದಲ್ಲಿ ಕೆಲಸದ ಮೇಲೆ ಜಪಾನ್‌ ಗೆ ತೆರಳಿದ್ದರು. ಗಂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಅನುಮಾನ ಬಂದು ೧೫ ಬಾರಿ ಕರೆ ಮಾಡಿದರೂ ಪೂರನ್‌ ಕುಮಾರ್‌ ದೂರವಾಣಿ ಕರೆ ಸ್ವೀಕರಿಸಿರಲಿಲ್ಲ. ಕೂಡಲೇ ಅಮನೀತ್‌ ಮಗಳಿಗೆ ಕರೆ ಮಾಡಿ ತಂದೆಯ ಕೊಠಡಿಗೆ ಹೋಗುವಂತೆ ಸೂಚಿಸಿದ್ದು, ಮಗಳು ಬರುವಷ್ಟರಲ್ಲಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ನನ್ನ ಕುಟುಂಬಕ್ಕಾಗಿ ಮಾತ್ರ ನಾನು ನ್ಯಾಯ ಕೇಳುತ್ತಿಲ್ಲ. ಪ್ರಮಾಣಿಕವಾಗಿ ಕೆಲಸ ಮಾಡುವ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯ ಪರವಾಗಿ ನ್ಯಾಯ ಕೇಳುತ್ತಿದ್ದೇನೆ. ನನ್ನ ಗಂಡ ದಲಿತ ಸಮುದಾಯಕ್ಕೆ ಸೇರಿದ್ದಾನೆ ಎಂಬ ಒಂದೇ ಕಾರಣಕ್ಕೆ ಕೆಲಸದಲ್ಲಿ ಕಿರುಕುಳ ನೀಡಲಾಗಿದೆ. ಅವರಿಗೆ ನೀಡಿದ ಮಾನಸಿಕ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಗಿದ್ದು, ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಅಮನೀತ್‌ ಕೌರ್‌ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *