2025ರ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆಯಾಗಿದ್ದು, ವೆನಿಜುವೆಲಾದ ರಾಜಕೀಯ ನಾಯಕಿ ಮಾರಿಯಾ ಕೊರಿನಾ ಮಚಾಡೋ ಅವರಿಗೆ ಈ ಗೌರವ ಲಭಿಸಿದೆ. ರಾಯಲ್ ಸ್ವೀಡಿಶ್ ಅಕಾಡೆಮಿಯ ನೊಬೆಲ್ ಸಮಿತಿಯು ಶಾಂತಿಯ ದೀರ್ಘಾವಧಿ ಪ್ರಯೋಜನ ಮತ್ತು ಅಂತಾರಾಷ್ಟ್ರೀಯ ಭ್ರಾತೃತ್ವಕ್ಕೆ ಕೊಡುಗೆಯನ್ನು ಪರಿಗಣಿಸಿ ಮಾರಿಯಾ ಕೊರಿನಾ ಅವರನ್ನು ಆಯ್ಕೆ ಮಾಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧಗಳನ್ನು ತಾನು ನಿಲ್ಲಿಸಿರುವ ಕಾರಣ ತನಗೆ ನೊಬೆಲ್ ಶಾಂತಿ ಪುರಸ್ಕಾರ ಸಿಗಬೇಕೆಂದು ಹಲುಬುತ್ತಿದ್ದರು. ನಾನು ಏಳು ಯುದ್ಧಗಳನ್ನು ಪರಿಹರಿಸಿದ್ದೇನೆ, ಎಂಟನೆಯದನ್ನು ಪರಿಹರಿಸುವ ಹತ್ತಿರದಲ್ಲಿದ್ದೇವೆ. ಇತಿಹಾಸದಲ್ಲಿ ಯಾರೂ ಇಷ್ಟೊಂದು ಪ್ರಕರಣಗಳನ್ನು ಪರಿಹರಿಸಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಅವರ ಆಸೆ ಈಡೇರಿಲ್ಲ.
ಇಸ್ರೇಲ್ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪಾಕಿಸ್ತಾನ ಸರ್ಕಾರ ಟ್ರಂಪ್ ಹೆಸರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಿವೆ. 2018ರಿಂದ ಹಲವು ಬಾರಿ ಟ್ರಂಪ್ ಹೆಸರು ನೊಬೆಲ್ ಪ್ರಶಸ್ತಿಗಾಗಿ ಅಮೆರಿಕದಿಂದ ಮತ್ತು ಹೊರ ದೇಶಗಳಿಂದ ನಾಮನಿರ್ದೇಶನಗೊಂಡಿದೆ.
ನೊಬೆಲ್ ಪ್ರಶಸ್ತಿ ನೀಡುವ ರಾಯಲ್ ಸ್ವೀಡಿಶ್ ಅಕಾಡೆಮಿಯು ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಪುರಸ್ಕರಿಸುವಾಗ ಪ್ರಮುಖವಾಗಿ ವ್ಯಕ್ತಿ ಅಥವಾ ಸಂಸ್ಥೆಗಳ ಪ್ರಯತ್ನದಿಂದ ಶಾಂತಿಯು ಎಷ್ಟು ದೀರ್ಘಾವಧಿವರೆಗೆ ನೆಲೆಸಿದೆ ಮತ್ತು ಅಂತಾರಾಷ್ಟ್ರೀಯ ಭ್ರಾತೃತ್ವಕ್ಕೆ ಇದರ ಕೊಡುಗೆ ಏನು ಎನ್ನುವ ಅಂಶವನ್ನೇ ಮುಖ್ಯವಾಗಿ ಪರಿಶೀಲಿಸುತ್ತದೆ ಎನ್ನುತ್ತಾರೆ ವಿಶ್ಲೇಷಕರು. 2009ರಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಈ ಗೌರವ ಲಭಿಸಿತ್ತು.
ನೊಬೆಲ್ ಪ್ರಶಸ್ತಿ ಸ್ವೀಡಿಶ್ ವಿಜ್ಞಾನಿ , ಸಂಶೋಧಕ ಮತ್ತು ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಅವರಿಂದ ಪ್ರಾರಂಭವಾಯಿತು. ಅವರು ಜಗತ್ತಿಗೆ ಡೈನಮೈಟ್ ನೀಡಿದರು. ಬಳಿಕ ನೊಬೆಲ್ ತನ್ನ ಸಂಪತ್ತನ್ನು ಮಾನವೀಯತೆ ಮುನ್ನಡೆಸುವ ಉದ್ದೇಶಗಳಿಗಾಗಿ ಬಳಸಬೇಕೆಂದು ನಿರ್ಧರಿಸಿದರು. ವಿಜ್ಞಾನ, ಸಾಹಿತ್ಯ ಅಥವಾ ಶಾಂತಿ ಕ್ಷೇತ್ರದಲ್ಲಿ ಮಾನವೀಯತೆಗೆ ಶ್ರೇಷ್ಠ ಕೊಡುಗೆ ನೀಡಿದವರಿಗೆ ವಾರ್ಷಿಕವಾಗಿ ಪ್ರಶಸ್ತಿಗಳನ್ನು ನೀಡಬೇಕೆಂದು ಅವರು ಉಯಿಲಿನಲ್ಲಿ ಬರೆದಿದ್ದರು. ನೊಬೆಲ್ ಪ್ರಶಸ್ತಿಯನ್ನು ಮೊದಲು 1901 ರಲ್ಲಿ ನೀಡಲಾಯಿತು.