Menu

ಕೊಡಿಗೆಹಳ್ಳಿಯಲ್ಲಿ ಸಮೀಕ್ಷೆಗೆ ಹೋದ ಶಿಕ್ಷಕಿಯ ಕೂಡಿಹಾಕಿದ್ದವನ ಬಂಧನ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಹೋಗಿದ್ದ ಶಿಕ್ಷಕಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಮನೆಯ ಕಾಂಪೌಂಡ್​​​ನಲ್ಲಿ ಕೂಡಿ ಹಾಕಿದ್ದ ಆರೋಪಿಯನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ಧಾರೆ.

ಕೊಡಿಗೆಹಳ್ಳಿಯ ಸಂದೀಪ್ (30) ಬಂಧಿತ ಆರೋಪಿ, ಶಿಕ್ಷಕಿ ಸುಶೀಲಮ್ಮ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಸಮೀಕ್ಷೆ ಕಾರ್ಯಕ್ಕಾಗಿ ಸುಶೀಲಮ್ಮ ಅವರನ್ನು ನಿಯೋಜಿಸಲಾಗಿತ್ತು. ಇದರಂತೆ ಮನೆ – ಮನೆ ಗಣತಿ ಕಾರ್ಯ ಮಾಡುತ್ತಿದ್ದರು. ಕೋತಿ ಹೊಸಹಳ್ಳಿ ಬಳಿ ಗಣತಿಗಾಗಿ ಆರೋಪಿಯ ಮನೆಗೆ ತೆರಳಿದ್ದರು. ಜಾತಿ ಸಮೀಕ್ಷೆಗೆ ಬಂದಿದ್ದು, ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆ ನೀಡುವಂತೆ ಮನೆಯಲ್ಲಿದ್ದ ಆರೋಪಿಯ ತಾಯಿಗೆ ಕೇಳಿದ್ದರು. ಮಾಹಿತಿ ಪಡೆದು ಆನ್​​ಲೈನ್ ಮುಖಾಂತರ ಒಟಿಪಿ ಸಂಖ್ಯೆ ಪಡೆದುಕೊಂಡಿದ್ದರು. ಈ ವೇಳೆ ಮನೆಗೆ ಬಂದ ಸಂದೀಪ್ ಶಿಕ್ಷಕಿ ಜೊತೆ ಗಲಾಟೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಾತಿ ಗಣತಿ ಕಾರ್ಯಕ್ಕಾಗಿ ಬಂದಿರುವುದಾಗಿ ಶಿಕ್ಷಕಿ ಪರಿಚಯಿಸಿಕೊಂಡು ಗುರುತಿನ ಚೀಟಿ ತೋರಿಸಿದರೂ ನಂಬದ ಆರೋಪಿ ನೀವು ಯಾವ ಕಂಪನಿಯವರು, ನನ್ನ ತಾಯಿಯಿಂದ ಯಾಕೆ ಒಟಿಪಿ ಪಡೆದುಕೊಂಡಿದ್ದೀರಿ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾನೆ. ಶಿಕ್ಷಕಿ ಬಳಿಯಿದ್ದ ಗುರುತಿನ ಚೀಟಿ ಕಸಿದುಕೊಂಡಿದ್ದಾನೆ. ಗಣತಿಗಾಗಿ ಬಂದಿರುವುದಾಗಿ ತಿಳಿಸಿದರೂ ನಂಬದ ಆರೋಪಿ ಮನೆ ಆವರಣದ ಗೇಟ್​​ಗೆ ಬೀಗ ಹಾಕಿ ಕೂಡಿ ಹಾಕಿದ್ದಾನೆ. ಕೂಡಲೇ ನಿಮ್ಮ ಕಂಪನಿಯವರನ್ನು ಕರೆಯಿಸುವಂತೆ ತಾಕೀತು ಮಾಡಿದ್ದ ಎಂದು ಪೊಲೀಸರಿಗೆ ಸುಶೀಲಮ್ಮ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದು ಮೇಲಧಿಕಾರಿಗಳು ಹೇಳಿದರೂ ಆರೋಪಿ ವಾದ ಮುಂದುವರಿಸಿದ್ದ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 112ಗೆ ಕರೆ ಮಾಡಿ ಸುಶೀಲಮ್ಮ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕೂಡಿಹಾಕಿದ್ದ ಮಹಿಳೆಯನ್ನು ಬಿಡಿಸಿಕೊಂಡು ದೂರು ಪಡೆದು ಆರೋಪಿಯನ್ನು ಬಂಧಿಸಿದ್ಧಾರೆ.

ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್, ಗಣತಿಗಾಗಿ ಮನೆಗೆ ತೆರಳಿದಾಗ ಆರೋಪಿಯು ಶಿಕ್ಷಕಿಯ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಆಕೆಯನ್ನು ಕೂಡಿ ಹಾಕಿದ್ದ, ಘಟನೆ ಸಂಬಂಧ ಶಿಕ್ಷಕಿ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆ ಮನೆಯಲ್ಲಿ ತಾಯಿ ಹಾಗೂ ಮಗ ಇಬ್ಬರು ವಾಸವಾಗಿದ್ದಾರೆ. ಆರೋಪಿ ಗೊರಗುಂಟೆಪಾಳ್ಯ ಬಳಿ ಟೀ ಶಾಪ್ ಇಟ್ಟುಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *