ಹಾವೇರಿಯ ರಟ್ಟಿಹಳ್ಳಿಯಲ್ಲಿ ಅಳಿಯನ ವಿಮೆ ಹಣದ ಆಸೆಗಾಗಿ ಆತನನ್ನು ಕೊಲೆ ಮಾಡಿದ ಬಳಿಕ ಅಪಘಾತವೆಂದು ಬಿಂಬಿಸಿದ್ದ ಮಾವ ಹಾಗೂ ಆತನ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ರಟ್ಟಿಹಳ್ಳಿ ಪಟ್ಟಣದ ಬಸವರಾಜ್ ಪುಟ್ಟಪ್ಪನವರ್ (38) ಕೊಲೆಯಾದವರು, ಮಾವ ಸಿದ್ದನಗೌಡ, ರಾಘವೇಂದ್ರ ಮಾಳಗೊಂಡರ, ಪ್ರವೀಣ ಹಾಗೂ ಲೋಕೇಶ ಹಲಗೇರಿ ಕೊಲೆಗೈದ ಆರೋಪಿಗಳು.
ಬಸವರಾಜ್‌ನ ತಂದೆ, ತಾಯಿ ಹಾಗೂ ಸಹೋದರರು ಈ ಹಿಂದೆಯೇ ನಿಧನ ಹೊಂದಿದ್ದರಿಂದ ಒಂಟಿಯಾಗಿದ್ದು, ಮದ್ಯ ವ್ಯಸನಿಯಾಗಿದ್ದರು. ಅವರ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಮನೆ, ಆಸ್ತಿ ಇತ್ತು. ಬಸವರಾಜ್ ಮದ್ಯ ವ್ಯಸನಿಯಾಗಿದ್ದ ಕಾರಣ ಸಿದ್ದನಗೌಡ, ಆತನ ಹೆಸರಲ್ಲಿದ್ದ ಎಂಟು ಎಕರೆ ಜಮೀನು ಹಾಗೂ ಮನೆ ಮೇಲೆ ಕಣ್ಣುಹಾಕಿದ್ದ.
ಬಸವರಾಜ್‌ನ ಸಹೋದರ ಸಂಬಂಧಿಕರು ಆತ ಯಾವುದೇ ಆಸ್ತಿ ಮಾರಾಟ ಮಾಡದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಇದನ್ನು ತಿಳಿದ ಸಿದ್ದನಗೌಡ, ರಾಘವೇಂದ್ರ ಎಂಬವನಿಗೆ ಹಣ ನೀಡಿ ಬಸವರಾಜ್ ಹೆಸರಿಗೆ 50,000 ರೂ.ಗಳ ಅಪಘಾತ ವಿಮೆ ಮಾಡಲು ಹೇಳಿದ್ದ. ಬಳಿಕ ಆ ಇನ್ಶೂರೆನ್ಸ್ ಹಣ ಪಡೆಯುವುದಕ್ಕಾಗಿ ಬಸವರಾಜ್‌ನನ್ನು ಕೊಲೆ ಮಾಡಲು ಯೋಜಿಸಿದ್ದ. ಸೆ.27 ರಂದು ಬಸವರಾಜ್‌ನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ ಮಾವ ಮತ್ತವನ ಗ್ಯಾಂಗ್, ಆತನಿಗೆ ಕಂಠಪೂರ್ತಿ ಕುಡಿಸಿ ಬೈಕ್‌ನಲ್ಲಿ ಊರಿಗೆ ಕಳುಹಿಸಿದ್ದರು. ಅದರ ಹಿಂದೆಯೇ ಕಾರು ತೆಗೆದುಕೊಂಡು ಹೋಗಿ ಡಿಕ್ಕಿ ಹೊಡೆದು ರಟ್ಟಿಹಳ್ಳಿ ಪೊಲೀಸ್ ಠಾಣೆಯ ಸಮೀಪ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದರು.
ಸ್ಥಳಕ್ಕಾಗಮಿಸಿದ್ದ ಬಸವರಾಜ್ ಕುಟುಂಬಸ್ಥರು ಇದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರ ತನಿಖೆ ವೇಳೆ ಆಸ್ತಿ, ಮನೆ ಹಾಗೂ ಇನ್ಶೂರೆನ್ಸ್ ಹಣದ ಆಸೆಗಾಗಿ ಆರೋಪಿಗಳು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.