ಚಿತ್ರದುರ್ಗ ತಾಲೂಕಿನ ಹೊಸ ಕಲ್ಲಹಳ್ಳಿ ಗ್ರಾಮದ ಕೆರೆಗೆ ಮೀನು ಹಿಡಿಯಲು ತೆರಳಿದ್ದ ಯುವಕ ಜಲಸಮಾಧಿಯಾಗಿದ್ದು, ಮೂರು ದಿನಗಳ ಬಳಿಕ ಶವ ಪತ್ತೆಯಾಗಿದೆ.
ಹೊಸಕಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಶವ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದ ಯಲ್ಲಪ್ಪ (33) ಮೃತ ಯುವಕ. ಈತ ಸಂಬಂಧಿಯ ಜೊತೆ ಮೀನು ಹಿಡಿಯಲು ಹೋಗಿದ್ದಾಗ ಈ ದುರಂತ ನಡೆದಿದೆ.
ಮೀನು ಹಿಡಿಯುವ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದ ಯಲ್ಲಪ್ಪ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಒಯ್ಯಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣಾ ಪಿಎಸ್‌ಐ ಸುರೇಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಧಿಕಾರಿಗಳಿಂದ ನಿಂದನೆ: ಆತ್ಮಹತ್ಯೆಗೆ ಯತ್ನ
ಕೊಪ್ಪಳದಲ್ಲಿ ಕಿರ್ಲೋಸ್ಕರ್ ಕಾರ್ಖಾನೆಯ ಮೇಲಧಿಕಾರಿಗಳಿಂದ ನಿಂದನೆ ಹಿನ್ನೆಲೆ ಸಹಾಯಕ ಇಂಜಿನಿಯರ್ ಕೆಮಿಕಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಸವರಾಜ ಅಡಗಿ ಆತ್ಮಹತ್ಯೆಗೆ ಯತ್ನಿಸಿದ ಸಹಾಯಕ ಇಂಜಿನಿಯರ್. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಖಾನೆಯಲ್ಲಿ ಬಸವರಾಜ ಕೆಲಸ ಮಾಡುವಾಗ ಯಂತ್ರ ಕೆಟ್ಟುಹೋಗಿತ್ತು. ಈ ಕಾರಣಕ್ಕೆ ಮೇಲಧಿಕಾರಿಗಳು ನೀನು ಸರಿಯಾಗಿ ಕೆಲಸ ಮಾಡಿಲ್ಲವೆಂದು ಬೈದಿದ್ದರು. ಇದರಿಂದ ನೊಂದಿದ್ದ ಬಸವರಾಜ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಶಾಕಾಪೂರ (ಎಸ್.ಎ) ಗ್ರಾಮದಲ್ಲಿ ಮನೆಯಿಂದ ಹೊರಗೆ ಹೋಗಿದ್ದ ಮಹಿಳೆ ಬಾವಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ. ಭಾಗ್ಯಶ್ರೀ (31) ಮೃತ ಮಹಿಳೆಯಾಗಿದ್ದು, ಕೌಟುಂಬಿಕ ಕಲಹದ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೃತರಿಗೆ ಮೂವರು ಮಕ್ಕಳಿದ್ದು, ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.