Menu

ಅಕ್ರಮ ಸಂಬಂಧ: ಜಾತ್ರೆಗೆ ಕರೆದೊಯ್ದು ಖಾನಾಪುರದ ಶಿಕ್ಷಕಿಯ ಕೊಲೆ

ಬೆಳಗಾವಿ ಖಾನಾಪುರ ತಾಲೂಕಿನ ನಂದಗಡದ ಅಂಗನವಾಡಿ ಶಿಕ್ಷಕಿ ಅಶ್ವಿನಿ ಪಾಟೀಲ್ (50) ಹತ್ಯೆ ಪ್ರಕರಣದ ಆರೋಪಿ ಶಂಕರ್ ಪಾಟೀಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ವಿನಿ ಪಾಟೀಲ್‌ ಮತ್ತು ಆರೋಪಿ ಅಕ್ರಮ ಸಂಬಂಧ ಹೊಂದಿದ್ದರು. ಆಕೆ ಶಂಕರ್‌ ಪಾಟೀಲ್‌ಗೆ ನೀಡಿದ್ದ ಐದು ಲಕ್ಷ ರೂ. ಸಾಲವನ್ನು ವಾಪಸ್‌ ಕೇಳಿದ್ದಕ್ಕೆ ಕೊಂದೇ ಬಿಟ್ಟಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ಸಾಲವಾಗಿ ಪಡೆದ ಹಣವನ್ನು ವಾಪಸ್ ಕೇಳಿದ ಕಾರಣಕ್ಕೆ ಕೊಲೆ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಅಶ್ವಿನಿ ಪಾಟೀಲ್‌ ನಂದನಗಢದ ಅಂಗನವಾಡಿ ಶಿಕ್ಷಕಿಯಾಗಿದ್ದು, ಅಕ್ಟೋಬರ್ 2 ರಂದು ಕಕ್ಕೇರಿ ಬಿಷ್ಟಾದೇವಿ ಜಾತ್ರೆಗೆಂದು ತೆರಳಿದ್ದವರು ಮನೆಗೆ ವಾಪಸಾಗಿಲ್ಲ. ನಂದಗಡ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು. ನಾಲ್ಕು ದಿನಗಳ ಬಳಿಕ ಅಶ್ವಿನಿ ಶವ ಕಾರವಾರ ಜಿಲ್ಲೆಯ ರಾಮನಗರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಅಶ್ವಿನಿಯನ್ನು ಜಾತ್ರೆಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ಶಂಕರ್ ಪಾಟೀಲ್ ಎಂಬ ಡ್ರೈವರ್ ಎಂದು ತಿಳಿದುಬಂದಿತ್ತು. ಪೊಲೀಸರ ವಿಚಾರಣೆಯ ನಂತರ ತಾನೇ ಕೊಲೆ ಮಾಡಿ ಶವವನ್ನು ಕಾಡಿನಲ್ಲಿ ಬಿಸಾಡಿ ಬಂದಿದ್ದಾಗಿ ಶಂಕರ್ ಒಪ್ಪಿಕೊಂಡಿದ್ದಾನೆ.

ಆರೋಪಿ ಶಂಕರ್, ಅಶ್ವಿನಿ ಅವರ ಮನೆಯ ಕೆಲಸದ ಸಮಯದಲ್ಲಿ ಪರಿಚಯವಾಗಿ ಸ್ನೇಹ ಬೆಳೆಸಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಅಶ್ವಿನಿಯಿಂದ ಐದು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಅಶ್ವಿನಿ ಹಣವನ್ನು ವಾಪಸ್ ಕೇಳಿದ್ದಕ್ಕೆ ಜಾತ್ರೆ ನೆಪ ಹೇಳಿ ಕರೆದುಕೊಂಡು ಹೋಗಿ ತಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ.

ಅಶ್ವಿನಿಯ ಗಂಡ 30 ವರ್ಷಗಳಿಂದ ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಮಗ ಬೇರೆ ಊರಿನಲ್ಲಿ ವಾಸವಾಗಿದ್ದಾನೆ. ಆರೋಪಿಯ ಬಂಧಿಸಿ ರಾಮನಗರ ಪೊಲೀಸರಿಗೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ನಂದಗಡ ಪೊಲೀಸರಿಗೆ ಹಸ್ತಾಂತರಿಸಲಾಗುತ್ತಿದೆ, ಮತ್ತಷ್ಟು ತನಿಖೆ ನಡೆಸಿ ಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚುವುದಾಗಿ ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *