ಹಾಸನ ಜಿಲ್ಲೆಯಲ್ಲಿ 40 ದಿನಗಳಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿದೆ. ಇಂದು ಯುವಕನೊಬ್ಬ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ 27 ವರ್ಷದ ಸಂಜಯ್ ಮೃತಪಟ್ಟವರು. ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಸಂಜಯ್‌ಗೆ ಬಿಪಿ ಹೆಚ್ಚಾಗಿ ಹೃದಯಾಘಾತ ಆಗಿತ್ತು, ಎದೆ ನೋವು ಎಂದು ಸಂಜಯನನ್ನು ಆತನ ಸ್ನೇಹಿತರು ಸೋಮನಹಳ್ಳಿ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಿಪಿ ಪರೀಕ್ಷೆ ಮಾಡಿದ್ದ ವೈದ್ಯರು 220ಕ್ಕೂ ಅಧಿಕ ಪ್ರಮಾಣದಲ್ಲಿ ಬಿಪಿ ಇದೆ ಎಂದು ತಿಳಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಕರೆದೊಯ್ಯಬೇಕೆನ್ನುವಷ್ಟರಲ್ಲಿ ಸಂಜಯ್ ಅಸು ನೀಗಿದ್ದರು.
ಎರಡುವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಸಂಜಯ್ ಸಾವಿನ ಬಗ್ಗೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಹಳ್ಳಿ ಮೈಸೂರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಕೇಸ್ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಹೊಳೆನರಸೀಪುರ ತಾಲೂಕು ಆಸ್ಪತ್ರೆಗೆ ಸಂಜಯ್ ಮೃತದೇಹ ಸ್ಥಳಾಂತರಿಸಲಾಗಿದೆ.
ನಿನ್ನೆ ಹಾಸನ ಜಿಲ್ಲೆಯಲ್ಲಿ ನಾಲ್ಕು ಹೃದಯಾಘಾತದಿಂದ ಸಾವು ಪ್ರಕರಣ ವರದಿಯಾಗಿದ್ದು, 40 ದಿನಗಳಲ್ಲಿ 24 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.