ದಾವಣಗೆರೆ ನಗರದ ಕಾಯಿಪೇಟೆಯ ಹಿರೇಮಠ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮನೆಯಲ್ಲಿನ ಯುಪಿಎಸ್ ಸ್ಫೋಟ ಆಗಿ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಬಸವ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೆಪಿ ಮುಖಂಡ ಎಚ್ ಎಂ. ರುದ್ರಮುನಿಸ್ಬಾಮೀ ಅವರ ಮೂರು ಬೆಡ್‌ರೂಂನ ಮನೆಯಲ್ಲಿ ಘಟನೆ ನಡೆದಿದ್ದು, ವಿಮಲಾ (75) ಹಾಗೂ ಕುಮಾರ (35) ಮೃತಪಟ್ಟವರು.
ತಡ ರಾತ್ರಿ ಮನೆಯಲ್ಲಿ ಸಂಪೂರ್ಣ ಹೊಗೆ ಕಾಣಿಸಿಕೊಂಡಿದ್ದು, ಮನೆಯಲ್ಲಿದ್ದವರೆಲ್ಲ ಹೊರಗೆ ಬಂದಿದ್ದಾರೆ, ವಿಮಲಾ ಹಾಗೂ ಕುಮಾರ ಮಲಗಿದ್ದ ಬೆಡ್ ರೂಂ ಬಾಗಿಲು ತೆಗೆಯಲಾಗದೆ ಸಂಪೂರ್ಣ ಹೊಗೆ ಆವರಿಸಿ ಹೊರಗೆ ಬರಲಾಗಿಲ್ಲ.
ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹೊರ ತಂದು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅಗ್ನಿ ಶಾಮಕ ದಳದ ಠಾಣಾಧಿಕಾರಿ ಫಕೀರಿಶ್ ಉಪ್ಪಾರ ತಂಡ ಕಾರ್ಯಾಚರಣೆ ನಡೆಸ ಬೆಂಕಿಯನ್ನು ನಿಯಂತ್ರಿಸಿದೆ.