“ನಮ್ಮ ರಾಜ್ಯದ ಪಾಲಿನ ನೀರನ್ನು ನಾವು ಬಳಸಿಕೊಳ್ಳುವ ವಿಚಾರದಲ್ಲಿ ನೆರೆ ರಾಜ್ಯಗಳು ರಾಜಕೀಯ ಮಾಡುತ್ತಿವೆ. ಈ ಬಗ್ಗೆ ಬಿಜೆಪಿ ಸಂಸದರು, ಕೇಂದ್ರ ಸಚಿವರು ಧ್ವನಿ ಎತ್ತುತ್ತಿಲ್ಲ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ನಮ್ಮ ಸರ್ಕಾರದ ಸಂಕಲ್ಪ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ‘ನೀರಿದ್ದರೆ ನಾಳೆ’ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮಾತನಾಡಿದರು. “ಕರ್ನಾಟಕ ರಾಜ್ಯದಲ್ಲಿ ನೀರಾವರಿ ಹಾಗೂ ಒಣ ಭೂಮಿ ಎರಡೂ ರೀತಿಯ ಭೂಮಿಗಳಿವೆ. ಕೃಷ್ಣಾ, ಕಾವೇರಿ, ತುಂಗಾಭದ್ರಾ, ಮಹದಾಯಿ ನಮ್ಮ ಜೀವನಾಡಿಗಳು. ನಮ್ಮ ರೈತರಿಗೆ ಪ್ರತಿ ನೀರಿನ ಹನಿಯ ಬೆಲೆ ಗೊತ್ತಿದೆ. ದೆಹಲಿಯಲ್ಲಿ ಯಮುನಾ ನದಿ ಸ್ವಚ್ಛ ಮಾಡಿ ನೀರು ನೀಡುತ್ತಾರೆ. ಅಲ್ಲಿ ಪ್ರತಿ ಮನೆಗೆ ಎರಡು ಸಂಪರ್ಕ ಇರುತ್ತದೆ. ಒಂದು ಕುಡಿಯುವ ನೀರು ಮತ್ತೊಂದು ಗಿಡಗಳು ಹಾಗೂ ದಿನಬಳಕೆಗೆ” ಎಂದು ತಿಳಿಸಿದರು.
“ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲು, ರೇಷ್ಮೆ ಜೊತೆಗೆ ಹೂವು, ತರಕಾರಿ, ಮಾವು ಬೆಳೆದು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತ್ತು ಮಾಡಲಾಗುತ್ತಿದೆ. ಬೋಸರಾಜು ಅವರ ನೇತೃತ್ವದಲ್ಲಿ ಸಣ್ಣ ನೀರಾವರಿ ಇಲಾಖೆಯು ಸಣ್ಣ ಕೆರೆಗಳನ್ನು ಉಳಿಸಿ, ಚೆಕ್ ಡ್ಯಾಮ್ ನಿರ್ಮಿಸಿ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡುತ್ತಿದೆ. ನಾನು ನೀರಾವರಿ ಇಲಾಖೆ ನೋಡಿದ್ದು, ನೀರಿನ ಬವಣೆ ಅರ್ಥವಾಗುತ್ತದೆ. ನಮ್ಮಲ್ಲಿ ನೀರಾವರಿಗೆ ನಾಲ್ಕು ನಿಗಮಗಳಿವೆ. ಈ ನಿಗಮಗಳನ್ನು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲೇ ಸಭೆ ಮಾಡಿ ಆರ್ಥಿಕ ವಿಚಾರಗಳನ್ನು ಚರ್ಚೆ ಮಾಡಲಾಗುವುದು. ರಾಜ್ಯದ ಜಲ ಸಮಸ್ಯೆಯನ್ನು ಸಿಎಂ ಮಾರ್ಗದರ್ಶನದಲ್ಲೇ ಬಗೆಹರಿಸಿಕೊಂಡು ಬಂದಿದ್ದೇವೆ” ಎಂದು ಹೇಳಿದರು.
“ನಾವು ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡಿದ್ದೇವೆ. ನಾನು ಮುಟ್ಟಬೇಕಾಗಿರುವ ಗುರಿಯನ್ನು ನಿಗದಿತ ಅವಧಿಯಲ್ಲಿ ಮುಟ್ಟಲು ಆಗುತ್ತಿಲ್ಲ. ಈ ಬಗ್ಗೆ ನನಗೆ ಸಮಾಧಾನ ಇಲ್ಲ. ನಾನು ಹಾಗೂ ಸಿಎಂ ಅವರು ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಂಕಲ್ಪ ಮಾಡಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ; ರೈತರ ಪರಿಹಾರಕ್ಕೆ 78 ಸಾವಿರ ಕೋಟಿ
“ಇತ್ತೀಚೆಗೆ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಪ್ರದೇಶದ ರೈತರ ಪರಿಹಾರಕ್ಕೆ 78 ಸಾವಿರ ಕೋಟಿಯನ್ನು ಮುಂದಿನ ಮೂರು ವರ್ಷಗಳಲ್ಲಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಈ ಯೋಜನೆಗೆ ಒಟ್ಟು 2 ಲಕ್ಷ ಕೋಟಿ ಅಗತ್ಯವಿದೆ. ಬಿಜೆಪಿ ಸರ್ಕಾರ ತನ್ನದೇ ಆದ ಪರಿಹಾರ ಘೋಷಿಸಿತ್ತು. ಆದರೆ ರೈತರು ಒಪ್ಪಿರಲಿಲ್ಲ. ನಾವು ರೈತರ ಹಿತ ಕಾಯಲು ಎಕರೆಗೆ 35-40 ಲಕ್ಷ ಪರಿಹಾರ ನೀಡಲು ತೀರ್ಮಾನ ಮಾಡಿದ್ದು, ರೈತರನ್ನು ಒಪ್ಪಿಸಿದ್ದೇವೆ. ಈ ಯೋಜನೆ ಅಧಿಸೂಚನೆ ಹೊರಡಿಸುವ ವಿಚಾರವಾಗಿ ನಾನು ಸುಮಾರು 10 ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದೇನೆ. ಅವರು ನಮ್ಮ ವಾದ ಒಪ್ಪಿದರು” ಎಂದರು.
ಮೇಕೆದಾಟು ಯೋಜನೆ ಬಗ್ಗೆ ಶೀಘ್ರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ
“ಮೇಕೆದಾಟು ಯೋಜನೆಯಿಂದ ನಮ್ಮ ರಾಜ್ಯಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ. ಈ ಸಮತೋಲಿತ ಅಣೆಕಟ್ಟಿನಿಂದ ಕುಡಿಯುವ ನೀರು ಪಡೆಯಬಹುದೇ ಹೊರತು ನಾವು ನೀರಾವರಿಗೆ ನೀರು ಪಡೆಯಲು ಆಗುವುದಿಲ್ಲ. ಕಷ್ಟ ಕಾಲದಲ್ಲಿ ಕಾವೇರಿ ಜಲಾನಯನ ಪ್ರದೇಶದ ಜನರ ಹಿತ ಕಾಯಲು ಸಾಧ್ಯವಾಗಲಿದೆ. 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ಬಗ್ಗೆ ನೆರೆ ರಾಜ್ಯದ ಸಹೋದರರಿಗೂ ಅರಿವಿದೆ. ಆದರೆ ಅವರ ಆಂತರಿಕ ರಾಜಕಾರಣದಿಂದ ಇದನ್ನು ವಿರೋಧಿಸುತ್ತಿ ದ್ದಾರೆ. ಈ ವಿಚಾರ ಸಧ್ಯದಲ್ಲೇ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆ ನಡೆಯಲಿದ್ದು, ನಮಗೆ ನ್ಯಾಯ ಸಿಗಲಿ ಎಂದು ದೇವರಲ್ಲಿ ಹಾಗೂ ನ್ಯಾಯಾಧೀಶರಿಗೆ ಇಲ್ಲಿಂದಲೇ ಪ್ರಾರ್ಥಿಸುವೆ. ನಾವು ಯಾರಿಗೂ ತೊಂದರೆ ನೀಡುವುದಿಲ್ಲ. ನಮ್ಮ ಹಕ್ಕಿನ ನೀರು ನಾವು ಬಳಸಿಕೊಳ್ಳಲು ಬಯಸುತ್ತೇವೆ” ಎಂದು ಹೇಳಿದರು.
“89 ವರ್ಷಗಳ ನಂತರ ಈ ವರ್ಷ ಜೂನ್ ತಿಂಗಳಲ್ಲೇ ಕೆ ಆರ್ ಎಸ್ ಭರ್ತಿಯಾಯಿತು. ಸಮುದ್ರಕ್ಕೆ ಹೆಚ್ಚುವರಿಯಾಗಿ ಹೋಗುತ್ತಿರುವ ನೀರನ್ನು ಹಿಡಿದಿಟ್ಟುಕೊಂಡಿದ್ದರೆ ರೈತರಿಗೆ ಬಹಳ ನೆರವಾಗುತ್ತಿತ್ತು” ಎಂದು ಹೇಳಿದರು.
ಆಂಧ್ರ ಸರ್ಕಾರ ಸಹಕಾರ ನೀಡುತ್ತಿಲ್ಲ
“ಇನ್ನು ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಪರಿಣಾಮ 30% ನೀರು ವ್ಯರ್ಥವಾಗುತ್ತಿದೆ. ಈ ಬಗ್ಗೆ ತೆಲಂಗಾಣ ಹಾಗೂ ಆಂಧ್ರ ಸಿಎಂ ಬಳಿ ಸಭೆ ಮಾಡಲು ಮನವಿ ಮಾಡಿದ್ದೇವೆ. ಆದರೆ ಆಂಧ್ರ ಸಿಎಂ ಸಮಯ ನೀಡುತ್ತಿಲ್ಲ. ಈ ವಿಚಾರದಲ್ಲಿ ಎಲ್ಲಾ ರಾಜ್ಯಗಳು ಸೇರಿ ತುಂಗಭದ್ರಾ ಮಂಡಳಿ ಮೂಲಕವೇ ತೀರ್ಮಾನ ಮಾಡಬೇಕು. ಈ ವ್ಯರ್ಥದ ನೀರು ಉಳಿಸಿಕೊಂಡರೆ ನಮ್ಮ ಹಾಗೂ ಆ ರಾಜ್ಯದ ರೈತರಿಗೆ ನೇರವಾಗುತ್ತದೆ. ಆದರೆ ಅವರಿಗೆ ರಾಜಕಾರಣವೇ ಮುಖ್ಯವಾಗಿದೆ” ಎಂದರು.
ಬಿಜೆಪಿ ಸಂಸದರು, ಕೇಂದ್ರ ಸಚಿವರು ಜನರ ಪರ ಧ್ವನಿ ಎತ್ತುತ್ತಿಲ್ಲ
“ಕೃಷ್ಣಾ ನದಿ ನೀರಿನ ಬಳಕೆಗೆ 2010ರಲ್ಲೇ ಹಂಚಿಕೆ ಆಗಿದ್ದರೂ ಕೇಂದ್ರ ಸರ್ಕಾರದ ಅಧಿಸೂಚನೆ ಬಾಕಿ ಇದೆ. ನಾವು ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಮುಂದಾದರೂ ಮಹಾರಾಷ್ಟ್ರ ಹಾಗೂ ಆಂಧ್ರದವರು ಕೇಂದ್ರ ಸಚಿವರ ಸಭೆ ಮುಂದೂಡಿಸಿದ್ದಾರೆ. ಈಗ ಮಹಾರಾಷ್ಟ್ರದವರು ನಮ್ಮ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ ಎನ್ನುತ್ತಿದ್ದಾರೆ. ನಮ್ಮ ಸಂಸದರು, ಕೇಂದ್ರ ಮಂತ್ರಿಗಳು ಮಹಾರಾಷ್ಟ್ರದ ನಡೆಯನ್ನು ವಿರೋಧಿಸಿ ರಾಜ್ಯದ ಜನರ ಪರ ಧ್ವನಿ ಎತ್ತುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ರೈತರು, ನೀರಿನ ವಿಚಾರದಲ್ಲಿ ರಾಜಕೀಯ ಸಲ್ಲ
“ರೈತರು, ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಈ ರಾಜ್ಯದ ಜನರ ಪರ ಧ್ವನಿ ಎತ್ತದಿದ್ದರೆ, ಅವರ ಬಗ್ಗೆ ರಾಜ್ಯದ ಜನ ತೀರ್ಮಾನ ಮಾಡಬೇಕು. ಇನ್ನು ಮಹದಾಯಿ ವಿಚಾರದಲ್ಲಿ ಆದೇಶ ಬಂದಿದ್ದರೂ ಸಣ್ಣ ರಾಜ್ಯ ಗೋವಾ ಒತ್ತಡ ಹೇರಿ ಕೇಂದ್ರ ಪರಿಸರ ಇಲಾಖೆ ಮೂಲಕ ಈ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವರ ಬಳಿ ಆರು ಬಾರಿ ಚರ್ಚೆ ಮಾಡಿದ್ದೇನೆ. ಅವರು ನಿಮ್ಮ ವಾದ ಸರಿ ಇದೆ. ನಿಮ್ಮ ಪರಿಸ್ಥಿತಿ ಅರಿವಿದೆ ಎಂದು ಹೇಳುತ್ತಾರೆ” ಎಂದು ಹೇಳಿದರು.
“ಕೃಷ್ಣಾ, ಮಹದಾಯಿ, ತುಂಗಭದ್ರಾ, ಕಾವೇರಿ ವಿಚಾರದಲ್ಲಿ ನಾವು ನೆರೆ ರಾಜ್ಯದ ಜೊತೆ ತಿಕ್ಕಾಟ ನಡೆಸಬೇಕಿದೆ. ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬರುತ್ತಿರುವ ಜನರನ್ನು ನಾವು ಸಹೋದರರಂತೆ ಸ್ವೀಕರಿಸಿ ಅವರಿಗೆ ಎಲ್ಲಾ ಸೌಕರ್ಯ ನೀಡುತ್ತಿದ್ದೇವೆ. ಆದರೂ ನಮ್ಮ ಬಗ್ಗೆ ಕಿಂಚಿತ್ತೂ ಸಹನೆ ತೋರುತ್ತಿಲ್ಲ” ಎಂದು ತಿಳಿಸಿದರು.
2027ರ ವೇಳೆಗೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು
ಇನ್ನು ನಾವು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಗೆ ಆದ್ಯತೆ ನೀಡಿ ಯೋಜನೆ ಪೂರ್ಣಗೋಳಿಸುತ್ತಿದ್ದೇವೆ. ವಿರೋಧ ಪಕ್ಷದವರು ನೀರು ತರಲು ಸಾಧ್ಯವಿಲ್ಲ ಎಂದು ಎಷ್ಟೇ ಟೀಕೆ ಮಾಡಿದರೂ ತುಮಕೂರಿನವರೆಗೂ ನೀರು ಹರಿಸಲು ಮುಂದಾಗಿದ್ದೇವೆ. ಸಕಲೇಶಪುರದಿಂದ ನೀರು ಪಂಪ್ ಮಾಡಿ ವಾಣಿ ವಿಲಾಸ ಸಾಗರಕ್ಕೆ ಹರಿಸುತ್ತಿದ್ದೇವೆ. 2027ರ ವೇಳೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸಲಾಗುವುದು. ತುಮಕೂರಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಆಕ್ಷೇಪಣೆ ವ್ಯಕ್ತವಾಗಿದ್ದು, ಅದನ್ನು ಸರಿಪಡಿಸುತ್ತೇವೆ. ಮೊದಲು ಕುಡಿಯುವ ನೀರು ಪೂರೈಸುವ ಉದ್ದೇಶವಿದ್ದು, ನಂತರ ಕೆರೆ ತುಂಬಿಸಲಾಗುವುದು.
“ತುಂಗಭದ್ರಾ ಗೇಟ್ ತುಂಡಾದಾಗ ಕೇವಲ 8 ದಿನಗಳಲ್ಲಿ ದುರಸ್ಥಿ ಮಾಡಿ, ರಾಜ್ಯದ ಎಲ್ಲಾ ಅಣೆಕಟ್ಟುಗಳ ಗೇಟ್ ಗಳ ಬದಲಾವಣೆ ಬಗ್ಗೆ ತೀರ್ಮಾನ ಮಾಡಲು ಸಿದ್ದರಾಮಯ್ಯ ಅವರ ಸರ್ಕಾರ ಸಮಿತಿ ರೂಪಿಸಿದೆ” ಎಂದರು.
“ನಾವು ನೆರೆ ರಾಜ್ಯಗಳ ಪಾಲಿನ ನೀರು ಕೇಳುತ್ತಿಲ್ಲ. ನಮ್ಮ ಹಕ್ಕಿನ ನೀರನ್ನು ಬಳಸಿಕೊಳ್ಳಲು ಅಡ್ಡಿ ಪಡಿಸಬೇಡಿ, ಸಹಕಾರ ನೀಡಿ ಎಂದು ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಸರ್ಕಾರಗಳನ್ನು ಕೇಳುತ್ತೇನೆ. ನಿಮ್ಮ ರಾಜ್ಯದವರು ನಮ್ಮಲ್ಲಿಗೆ ಬಂದು ಶಿಕ್ಷಣ ಪಡೆದು, ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಹೇಳಿದರು.
“ನಮ್ಮ ಸರ್ಕಾರ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಆರ್ಥಿಕ ಶಕ್ತಿ ತುಂಬಲು ಐದು ಗ್ಯಾರಂಟಿ ಯೋಜನೆ ನೀಡಿದ್ದು, ಪ್ರತಿ ವರ್ಷ 54 ಸಾವಿರ ಕೋಟಿ ಹಣವನ್ನು ಜನರ ಜೇಬಿಗೆ ಹಾಕಿದ್ದೇವೆ. ನೀರಿನ ಪ್ರಾಮುಖ್ಯತೆ ಹೆಚ್ಚಾಗಿದೆ ನೀರಿಗೆ ಹಾಲಿನ ಬೆಲೆ ಬಂದಿದೆ. ಇದನ್ನು ನಾವು ಕಾಪಾಡೋಣ. ಈ ರಾಜ್ಯವನ್ನು ಸಂಪತ್ತಿನ ರಾಜ್ಯವಾಗಿ ಮಾಡೋಣ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ” ಎಂದು ತಿಳಿಸಿದರು.