ಗಂಗಾವತಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ ಅವರನ್ನು ಕೊಚ್ಚಿ ಕೊಲೆಗೈದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತರೊಂದಿಗೆ ಮಂಗಳವಾರ ರಾತ್ರಿ ಊಟ ಮುಗಿಸಿ ವೆಂಕಟೇಶ ಬೈಕ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಕಾರಿನಲ್ಲಿ ಹಿಂಬಾಲಿಸಿ ಅಪಘಾತದ ನೆಪಮಾಡಿ ಕೊಲೆ ಮಾಡಿದ್ದ ಐವರಲ್ಲಿ ನಾಲ್ವರು ಆರೋಪಿಗಳನ್ನು ಬಳ್ಳಾರಿಯ ಕಂಪ್ಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ವೆಂಕಟೇಶ್ರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಧನಂಜಯ್, ಮೈಲಾರಿ, ಸಲೀಂ, ಭೀಮ ಬಂಧಿತ ಆರೋಪಿಗಳು. ಧನಂಜಯ್, ಮೈಲಾರಿ ,ಸಲೀಂ, ಭೀಮ ಸ್ವಯಂ ಪೊಲೀಸರ ಎದುರು ಶರಣಾಗಿದ್ದಾರೆ. ಇಬ್ಬರು ಆರೋಪಿಗಳಾದ ಕಾರ್ತಿಕ್ ಮತ್ತು ಲಕ್ಷ್ಮಣ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಲೀಲಾವತಿ ಆಸ್ಪತ್ರೆಯ ಮುಂಭಾಗ ಮಧ್ಯರಾತ್ರಿ ಕಾರಲ್ಲಿ ಅಗಮಿಸಿದ್ದ ದುಷ್ಕರ್ಮಿಗಳು ವೆಂಕಟೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಸ್ನೇಹಿತರೊಂದಿಗೆ ಊಟ ಮುಗಿಸಿದ ವೆಂಕಟೇಶ್ ದೇವಿ ಕ್ಯಾಂಪ್ ನಿಂದ ಗಂಗಾವತಿಗೆ ಹೋಗುತ್ತಿದ್ದಾಗ ಆರೋಪಿಗಳು ಕಾರಿನಿಂದ ವೆಂಕಟೇಶ್ ಇದ್ದ ಬೈಕ್ ಗೆ ಗುದ್ದಿಸಿದ್ದಾರೆ. ವೆಂಕಟೇಶ್ ಕೆಳಗೆ ಬೀಳುತ್ತಿದ್ದಂತೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.
ಈ ಕೊಲೆಯ ಹಿಂದೆ ಇಸ್ಪೀಟ್ ದಂಧೆಗೆ ಸಂಬಂಧಿಸಿದ ಎರಡು ಗುಂಪುಗಳ ನಡುವಿನ ವೈಷಮ್ಯ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಗಂಗಾವತಿಯಲ್ಲಿ ಇಸ್ಪೀಟ್ ದಂಧೆಯ ವಿಚಾರದಲ್ಲಿ ಗುಂಪುಗಳ ನಡುವೆ ತಿಕ್ಕಾಟ ನಡೆಯುತ್ತಿತ್ತು ಎಂದು ಹೇಳಲಾಗಿದೆ.