ಮೈಸೂರಿನಲ್ಲಿ ನಾಡ ಹಬ್ಬ ದಸರಾದಲ್ಲಿ ಬಲೂನ್ ವ್ಯಾಪಾರಕ್ಕೆ ಬಂದಿದ್ದ ಹಕ್ಕಿಪಿಕ್ಕಿ ಸಮುದಾಯದ ಬಡ ಕುಟುಂಬವೊಂದರ ಹತ್ತು ವರ್ಷದ ಬಾಲಕಿಯ ಶವ ನಜರ್‌ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ದಸರಾ ಹಬ್ಬದ ಸಂಭ್ರಮದ ನಡುವೆ ಈ ಪೈಶಾಚಿಕ ಕೃತ್ಯಕ್ಕೆ ಮೈಸೂರು ಬೆಚ್ಚಿ ಬಿದ್ದಿದೆ.
ಗುಲ್ಬರ್ಗದಿಂದ ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 50 ಕುಟುಂಬಗಳು ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಾತ್ಕಾಲಿಕವಾಗಿ ತಂಗಿದ್ದವು. ಚಾಮುಂಡಿ ಬೆಟ್ಟ, ವಸ್ತು ಪ್ರದರ್ಶನ, ಬನ್ನಿ ಮಂಟಪ, ದೇವರಾಜ ಮಾರುಕಟ್ಟೆ ಸೇರಿದಂತೆ ಹಲವು ಸ್ಥಳಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಒಂದು ಕುಟುಂಬಕ್ಕೆ ಸೇರಿದ 10 ವರ್ಷದ ಬಾಲಕಿಯೊಬ್ಬಳು ರಾತ್ರಿ ಕಾಣೆಯಾಗಿದ್ದಳು.
ಬುಧವಾರ ರಾತ್ರಿ 12 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡು ಬಂದಿದ್ದ ಕುಟುಂಬದ ಒಟ್ಟಿಗೆ ಎಂಟು ಜನ ಮಲಗಿದ್ದರು. ಮುಂಜಾನೆ 4 ಗಂಟೆರಿಗೆ ಮಳೆ ಬಂದಿದೆ. ಎಚ್ಚರಗೊಂಡಾಗ ಬಾಲಕಿಯು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕುಟುಂಬಸ್ಥರು ಮಳೆಯಲ್ಲೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಬಳಿಕ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದರು.
ಬೆಳಗ್ಗೆ ಜೋಪಡಿಯ ಪಕ್ಕದ ಗುಂಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಶವದ ಮೇಲೆ ಸರಿಯಾಗಿ ಬಟ್ಟೆಯಿರಲಿಲ್ಲ, ಇದರಿಂದ ಕುಟುಂಬಸ್ಥರು ಅತ್ಯಾಚಾರ ಮತ್ತು ಕೊಲೆಯ ಅನುಮಾನವಿದೆ ಎಂದು ಹೇಳಿದ್ದಾರೆ. ಪೊಲೀಸರು 50 ಕುಟುಂಬಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ. ಯಾವುದೇ ಶಂಕಿತರನ್ನು ಗುರುತಿಸಲಾಗಿಲ್ಲ, ಆದರೂ ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿಯ ಸಿಸಿಟಿವಿ ಪೋಟೋ ಲಭ್ಯವಾಗಿದ್ದು, ರೆಡ್ ಶರ್ಟ್, ಜೀನ್ಸ್ ಪ್ಯಾಂಡ್ ಧರಿಸಿರೋ ಶಂಕಿತ ಆರೋಪಿ ಕಾಲಿನಲ್ಲಿ ಚಪ್ಪಲಿ ಇಲ್ಲದೆ ನಡೆದುಕೊಂಡೇ ಬಂದು ಕೃತ್ಯ ಎಸಗಿ ನಡೆದುಕೊಂಡೇ ಹೋಗಿದ್ದಾನೆ. ಈಗಾಗಲೇ ತನಿಖೆಗೆ ಪೊಲೀಸರು ಮೂರು ತಂಡ ರಚಿಸಿದ್ದಾರೆ. ಕೃತ್ಯ ನಡೆದ ಸ್ಥಳದ ಸುತ್ತಲೂ ಸೇರಿದಂತೆ ಕೊಲೆ ಆರೋಪಿ ಓಡಾಡಿರೋ ದೃಶ್ಯಗಳ ಸಿಸಿಟಿವಿ ಪುಟೇಜ್ ಪೊಲೀಸರು ಸಂಗ್ರಹಿಸುತ್ತಿದ್ದಾರೆ.