Thursday, October 09, 2025
Menu

ಬೆಂಗಳೂರು ಟ್ರಾಫಿಕ್‌ ನಿರ್ವಹಣೆಗೆ ಟನಲ್ ರಸ್ತೆ ಹೊರತು ಪರ್ಯಾಯ ಏನಿದೆ: ಡಿಸಿಎಂ

ಸಾರ್ವಜನಿಕ ಸಾರಿಗೆ ಉತ್ತಮ ಆಯ್ಕೆಯೆಂಬುದು ನಿಜ. ಹಾಗಾದರೆ ಸಾರ್ವಜನಿಕ ಸಾರಿಗೆಗೆ ಇನ್ನು ಎಷ್ಟು ವಾಹನ ಸೇರಿಸಬೇಕು, 1 ಸಾವಿರ ಸಾಕೇ, ನಾನು ಸೇರಿಸಲು ಸಿದ್ಧ. ಜನರೆಲ್ಲರೂ ಬಸ್ ನಲ್ಲಿ ಪ್ರಯಾಣ ಆರಂಭಿಸುತ್ತಾರಾ, ಹೀಗಾಗಿ ಟನಲ್ ಹೊರತಾಗಿ ಪರ್ಯಾಯ ಪರಿಹಾರ ಏನಿದೆ, ಇದೇ ಕಾರಣಕ್ಕೆ ನಾನು ಟನಲ್ ರಸ್ತೆಗೆ ಮುಂದಾಗಿದ್ದೇನೆ ಎಂದು ನಗರಾಭಿವೃದ್ಧಿ ಸಚಿವರಾದ ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯು (B.PAC) ಮೌಂಟ್ ಕಾರ್ಮೆಲ್ ಕಾಲೇಜು ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಬೆಂಗಳೂರು ಅಭಿವೃದ್ಧಿ, ಪರಿವರ್ತನೆ ಕುರಿತು ಏರ್ಪಡಿಸಿದ್ದ ಸಂವಾದದಲ್ಲಿ ಬೆಂಗಳೂರಿನಲ್ಲಿ ಟನಲ್ ರಸ್ತೆಗೆ ಸಾಕಷ್ಟು ವಿರೋಧವಿದೆ, ಸಾರ್ವಜನಿಕ ಸಾರಿಗೆ ಉತ್ತಮ ಆಯ್ಕೆ ಅಲ್ಲವೇ ಎಂದು ಕೇಳಿದಾಗ, “ಟೀಕೆ ಇದ್ದೇ ಇರುತ್ತದೆ. ನೀವು ಎಲ್ಲರನ್ನು ತೃಪ್ತಿಪಡಿಸಲು ಆಗುವುದಿಲ್ಲ” ಎಂದರು.

ಟನಲ್ ರಸ್ತೆ ಜೊತೆಗೆ 44 ಕಿ.ಮೀ ಡಬಲ್ ಡೆಕ್ಕರ್ ಮೇಲ್ಸೇತುವೆ, 120 ಕಿ.ಮೀ ನಷ್ಟು ಉದ್ದದ ಮೇಲ್ಸೇತುವೆಗಳಿಗೆ ಯೋಜನೆ ರೂಪಿಸಿದ್ದೇವೆ. ರಾಜಕಾಲುವೆಗಳ ಅಕ್ಕಪಕ್ಕದಲ್ಲಿ 50 ಅಡಿ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಆಮೂಲಕ 300 ಕಿ.ಮೀ ಹೆಚ್ಚುವರಿ ರಸ್ತೆ ಸೇರ್ಪಡೆ ಮಾಡಲಾಗುತ್ತಿದೆ. ಇದಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ. ಒಂದೆರಡು ವರ್ಷಗಳಲ್ಲಿ ಎಲ್ಲವನ್ನು ಸರಿಪಡಿಸಲು ಸಾಧ್ಯವಿಲ್ಲ. ಸಮಯವೇ ಸಂಪತ್ತು. ವಿದ್ಯಾರ್ಥಿಗಳ ಸಮಯವನ್ನು ಟ್ರಾಫಿಕ್ ನಲ್ಲಿ ಹಾಳು ಮಾಡಲು ಬಯಸುವುದಿಲ್ಲ. ಆದಷ್ಟು ಬೇಗ ಈ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಯೋಜನೆ ಆರಂಭಿಸಿಲ್ಲ

“ಬೆಂಗಳೂರಿನಲ್ಲಿ 104 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ ರಸ್ತೆ ಯೋಜನೆ ರೂಪಿಸಲಾಗಿದೆ. 40 ಕಿ.ಮೀ ಉದ್ದದ ಟನಲ್ ರಸ್ತೆ ನಿರ್ಮಿಸಲು ಮುಂದಾಗಿದ್ದೇವೆ. ಇದು ಸೂಕ್ತ ಪರಿಹಾರವಲ್ಲದಿದ್ದರೆ ಮುಂಬೈನಲ್ಲಿ ಈ ಯೋಜನೆ ಯಾಕೆ ಮಾಡುತ್ತಿದ್ದಾರೆ, ಜಪಾನ್, ಲಂಡನ್ ನಲ್ಲಿ ಯಾಕೆ ಮಾಡುತ್ತಿದ್ದಾರೆ. ಹೆಬ್ಬಾಳ, ಕೆ.ಆರ್ ಪುರಂ ಜಕ್ಷನ್ ಸೇರಿದಂತೆ ಎಲ್ಲಿ ನೋಡಿದರೂ ಟ್ರಾಫಿಕ್ ಹೆಚ್ಚಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನಾಲ್ಕು ವರ್ಷಗಳ ಅಧಿಕಾರ ಮಾಡಿತ್ತು. ಆಗ ಬೆಂಗಳೂರಿನ ಸಮಸ್ಯೆ ಬಗೆಹರಿಸಲು ಒಂದು ಫ್ಲೈಓವರ್, ರಸ್ತೆ ಸೇರಿದಂತೆ ಒಂದೇ ಒಂದು ಕೆಲಸ ಮಾಡಿದ್ದರೆ ಹೇಳಿ, ನಾನು ಇಲ್ಲೇ ನನ್ನ ಹೆಸರು ಬದಲಾಯಿಸಿಕೊಂಡು ಹೋಗುತ್ತೇನೆ. ಟನಲ್ ಹೊರತಾಗಿ ಉಳಿದ ಎಲ್ಲಾ ಯೋಜನೆಗಳು ಮೂರ್ನಾಲ್ಕು ವರ್ಷಗಳಲ್ಲಿ ಮುಕ್ತಾಯವಾಗಲಿದ್ದು, ಟನಲ್ ರಸ್ತೆಗೆ ನಾಲ್ಕು ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶ ಬೇಕಾಗಿದೆ. ಟನಲ್ ಕೊರೆಯುವ ಯಂತ್ರ ಬರಲು ಒಂದೂವರೆ ವರ್ಷಬೇಕಾಗುತ್ತದೆ. ಟನಲ್ ರಸ್ತೆಯಿಂದ ಲಾಲ್ ಬಾಗ್ ಗೆ ಯಾವುದೇ ತೊಂದರೆ ಆಗುವುದಿಲ್ಲ‌ ಎಂದು ವಿವರಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಂಪನ್ಮೂಲ ಕ್ರೋಢೀಕರಣ ಹೇಗೆ ಎಂದು ಕೇಳಿದಾಗ, “ಕೆಲವು ಪ್ರದೇಶಗಳಲ್ಲಿ ನಾವು ಬೂಟ್ ಮಾದರಿ (ಬಿಲ್ಡ್ ಆಪರೇಟ್ ಟ್ರಾನ್ಸ್ಪೋರ್ಟ್) ಅಳವಡಿಸಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ನಾವು 1.25 ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ಮುಂದಾಗಿದ್ದೇವೆ. ಟನಲ್ ರಸ್ತೆಗೆ 35-40 ಸಾವಿರ ಕೋಟಿ, ಮೇಲ್ಸೇತುವೆಗೆ 14 ಸಾವಿರ ಕೋಟಿ, ಡಬಲ್ ಡೆಕ್ಕರ್ ರಸ್ತೆಗೆ 10 ಸಾವಿರ ಕೋಟಿ, 16,100 ಕೋಟಿ, ಬಫರ್ ಜೋನ್ ರಸ್ತೆಗೆ 4 ಸಾವಿರ ಕೋಟಿ ಅನುದಾನದ ಅಗತ್ಯವಿದೆ” ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ನೀತಿ, ಯೋಜನೆ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ

ಸರ್ಕಾರ ಬದಲಾದರೆ ನಿಮ್ಮ ಯೋಜನೆಗಳು ಹೇಗೆ ಮುಂದುವರಿಯಲಿವೆ ಎಂದು ಕೇಳಿದಾಗ, “ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ತಂದಿರುವ ಕಾನೂನು, ಯೋಜನೆಗಳನ್ನು ಬೇರೆ ಯಾವುದೇ ಸರ್ಕಾರಗಳು ಬದಲಾಯಿಸಲು ಸಾಧ್ಯವಾಗಿಲ್ಲ. ಶೈಕ್ಷಣಿಕ ಹಕ್ಕು, ಆಹಾರ ಭದ್ರತೆ, ಉದ್ಯೋಗ ಖಾತ್ರಿ, ಬ್ಯಾಂಕುಗಳ ರಾಷ್ಟ್ರೀಕರಣ, ಆಧಾರ್, ಭೂ ಸುಧಾರಣೆ ಕಾಯ್ದೆ ಯಾವುದೇ ಆಗಿರಲಿ ನಮ್ಮ ಯೋಜನೆಯನ್ನು ಬೇರೆಯವರು ಬದಲಿಸಲು ಆಗುವುದಿಲ್ಲ. ನಾವು ಬೆಂಗಳೂರಿನ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣ ಮಾಡುತ್ತಿದ್ದು, ಬಿ ಖಾತಗಳನ್ನು ಎ ಖಾತಾ ಮಾಡುತ್ತಿದ್ದೇವೆ. ಇ ಖಾತಾ ನೀಡುತ್ತಿದ್ದೇವೆ. ಯಾವುದೇ ತೀರ್ಮಾನ ಮಾಡಿದರೂ ಕಾನೂನಾತ್ಮಕ ಹಾಗೂ ದೂರದೃಷ್ಟಿಯಿಂದ ಮಾಡಿರುತ್ತೇವೆ. ಇದನ್ನು ಬೇರೆ ಸರ್ಕಾರಗಳು ಬದಲಾಯಿಸಲು ಆಗುವುದಿಲ್ಲ. ರಾಜಕೀಯವಾಗಿ ಕೆಲವರು ಟೀಕೆ ಮಾಡಬಹುದು. ಅದನ್ನು ನಾನು ಸ್ವಾಗತಿಸುತ್ತೇನೆ. ಜಿಬಿಎ ಮಾಡುವಾಗಲೂ ನಾನು ಸಮಿತಿ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ ನಂತರವೇ ಮುಂದುವರಿದಿದ್ದು” ಎಂದರು.

ಬೆಂಗಳೂರಿನ ಪಾದಚಾರಿ ಮಾರ್ಗಗಳ ಪರಿಸ್ಥಿತಿ ಸರಿಯಿಲ್ಲ ಎಂದು ವಿದ್ಯಾರ್ಥಿಯೊಬ್ಬರು ಕೇಳಿದಾಗ, “ಪಾದಚಾರಿ ಮಾರ್ಗಗಳಲ್ಲಿ ಸಮಸ್ಯೆ ಇರುವುದನ್ನು ಒಪ್ಪುತ್ತೇನೆ. ಈಗ ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಮಾರ್ಗ ಸಾಗಿದೆ. ಕೇಬಲ್ ಗಳನ್ನು ಭೂಮಿಯ ಒಳಗೆ ತೆಗೆದುಕೊಂಡು ಹೋಗಲು ಅಗೆಯಲಾಗುತ್ತದೆ. ಈ ಕಾಮಗಾರಿಗಳನ್ನು ಸರಿಯಾದ ಸಮಯಕ್ಕೆ ಮುಗಿಸುತ್ತಿಲ್ಲ. ಹೀಗಾಗಿ ನಾವು ಕೇಬಲ್ ಗಳಿಗಾಗಿಯೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಟಿವಿ ಕೇಬಲ್ ಗಳನ್ನು ಹೇಗೆಂದರೆ ಹಾಗೆ ಎಳೆಯಲಾಗಿದೆ. ಅದನ್ನು ಕೂಡಲೇ ಕತ್ತರಿಸುತ್ತೇನೆ. ಆಗ ಜನರೇ ಟಿವಿ ಬರುತ್ತಿಲ್ಲ ಎಂದು ಟೀಕೆ ಮಾಡುತ್ತಾರೆ. ನಾವು ಕೇಬಲ್ ಗಳನ್ನು ಭೂಮಿಯ ಒಳಗೆ ತೆಗೆದುಕೊಂಡು ಹೋಗಲು 400 -500 ಕಿ.ಮೀ ಉದ್ದದಷ್ಟು ರಸ್ತೆಗಳಲ್ಲಿ ಅವಕಾಶ ಕಲ್ಪಿಸಿದ್ದೇವೆ. ಆದರೂ ಯಾರೂ ಇದನ್ನು ಬಳಸುತ್ತಿಲ್ಲ. ಈ ಸಮಸ್ಯೆಯನ್ನು ವ್ಯವಸ್ಥಿತವಾಗಿ ಸರಿಪಡಿಸಲಾಗುವುದು. ಪಾದಚಾರಿ ಮಾರ್ಗಗಳಲ್ಲಿ ಬೀದಿ ವ್ಯಾಪಾರ ತಪ್ಪಿಸಲು ಪಾಲಿಕೆ ವತಿಯಿಂದ ಪ್ರತ್ಯೇಕ ವಾಹನ ನೀಡಲಾಗುತ್ತಿದೆ. ಆ ಮೂಲಕ ಪಾದಚಾರಿ ಮಾರ್ಗವನ್ನು ತೆರವುಗೊಳಿಸಲು ಮುಂದಾಗಿದ್ದೇವೆ” ಎಂದು ತಿಳಿಸಿದರು.

ಮೆಟ್ರೋ ಪ್ರಯಾಣ ದರ ಏರಿಕೆ ಹಾಗೂ ಹಳದಿ ಮಾರ್ಗದಲ್ಲಿ ರೈಲುಗಳ ಕೊರತೆ ವಿಚಾರವಾಗಿ ಕೇಳಿದಾಗ, “ಮೆಟ್ರೋ ದರ ನಿಗದಿ ಮಾಡಿದ್ದು ನಾವಲ್ಲ. ಈ ಯೋಜನೆಯಲ್ಲಿ ನಾವು ಹಾಗೂ ಕೇಂದ್ರ ಸರ್ಕಾರ ಪಾಲುದಾರರು. ಇದಕ್ಕಾಗಿ ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಸಮಿತಿ ದರ ನಿಗದಿ ಮಾಡಲಿದೆ. ಹಳದಿ ವಾರ್ಗದ ರೈಲುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಬೇಕು. ಐದನೇ ರೈಲು ಶೀಘ್ರದಲ್ಲೇ ಆಗಮಿಸಲಿದೆ. ಕೆಲವು ಸಂಸ್ಥೆಗಳು ಮೆಟ್ರೋ ರೈಲು ಬೋಗಿಗಳನ್ನು ರಾಜ್ಯದಲ್ಲೇ ಉತ್ಪಾದನೆ ಮಾಡಲು ಮುಂದಾಗಿದ್ದು, ನಾವು ಆ ಬಗ್ಗೆ ಗಮನಹರಿಸುತ್ತಿದ್ದೇವೆ” ಎಂದರು.

ಎಚ್ಎಎಲ್ ನಿವೃತ್ತ ನೌಕರ ಫ್ರಾನ್ಸಿಸ್, ಬಿಬಿಎಂಪಿ ಸಹಯೋಗದಲ್ಲಿ ನಾನು ಬೀದಿ ಸೇವಕ ಎಂಬ ಪರಿಕಲ್ಪನೆಯಲ್ಲಿ ನಮ್ಮ ಪ್ರದೇಶದ ರಸ್ತೆಗಳ ಸುಧಾರಣೆ, ಕಸ ವಿಲೇವಾರಿ ಮಾಡುತ್ತಿದ್ದೇವೆ. ಜಿಬಿಎಯಲ್ಲಿ ನಮಗೆ ಸೇವೆ ಮಾಡುವಂತಹ ಕಾರ್ಪೊರೇಟರ್ ಗಳನ್ನು ನೀಡಿ ಎಂದು ಮಾಡಿದ ಮನವಿಗೆ “ನೀವು ಈಗಾಗಲೇ ಜನರ ಸೇವೆ ಮಾಡುತ್ತಿದ್ದು, ನೀವೆ ಚುನಾವಣೆಯಲ್ಲಿ ಸ್ಪರ್ಧಿಸಿ. ಉತ್ತಮ ನಾಯಕರನ್ನು ನಾನು ಆಯ್ಕೆ ಮಾಡುವುದಕ್ಕಿಂತ ನೀವೇ ಆಯ್ಕೆ ಮಾಡಬೇಕು” ಎಂದು ತಿಳಿಸಿದರು.

ಜಿಬಿಎ ಮೂಲಕ ಮುಂಬರುವ ದಿನಗಳಲ್ಲಿ ಯಾವುದೇ ಫ್ಲಾಟ್ ಗಳಿದ್ದರೂ ಅದರಲ್ಲಿ 40% ಹಸಿರು ರಬೇಕು ಎಂಬ ಕಾನೂನು ತನ್ನಿ ಎಂದು ನೀಡಿದ ಸಲಹೆಗೆ ಸ್ಪಂದಿಸಿ, “ಬೆಂಗಳೂರಿನಲ್ಲಿ ಈ ಹಿಂದೆ ಕೆಲವು ಬಡವಣೆಗಳಲ್ಲಿ ಮಾತ್ರ 10 ಸಾವಿರ ಚದರಡಿ ನಿವೇಶನಗಳಿದ್ದವು. ಈಗ ಸರ್ಕಾರ ನಿವೇಶನದ ಮಿತಿಯನ್ನು 50X80ಕ್ಕೆ ಸೀಮಿತಗೊಳಿಸಿದೆ. ಭೂಮಿಯ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನ ಹಲವು ಅಂತಸ್ಥಿನ ಕಟ್ಟಡ ನೀರ್ಮಾಣ ಮಾಡುತ್ತಿದ್ದಾರೆ. ನಿಮ್ಮ ಸಲಹೆಯನ್ನು ಸ್ವೀಕರಿಸಿ ನಗರ ಯೋಜಕ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ” ಎಂದರು.

ಟನಲ್ ಹಾಗೂ ಇತರೆ ಮೇಲ್ಸೇತುವೆ ಕಾಮಗಾರಿಗೆ ನಾಲ್ಕು ವರ್ಷ ಬೇಕು, ತಾತ್ಕಾಲಿಕವಾಗಿ ಪರಿಹಾರ ಏನಿದೆ ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ “ಇದಕ್ಕಾಗಿ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಮೇಲ್ಸೇತುವೆ ನಿರ್ಮಿಸಲು ಮುಂದಾಗಿದ್ದೇವೆ. ಟ್ರಾಫಿಕ್ ಪೊಲೀಸರು ಎಐ ತಂತ್ರಜ್ಞಾನದ ಮೂಲಕ ಸಂಚಾರ ದಟ್ಟಣೆ ನಿವಾರಿಸಲು ಕಾರ್ಯಯೋಜನೆ ರೂಪಿಸುತ್ತಿದ್ದಾರೆ. ಸಂಚಾರ ದಟ್ಟಣೆ ನಿವಾರಣೆಗೆ ಅಲ್ಪಾವಧಿ ಹಾಗೂ ದೀರ್ಘಾವಧಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ” ಎಂದು ಉತ್ತರಿಸಿದರು.

Related Posts

Leave a Reply

Your email address will not be published. Required fields are marked *