ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೇನಹಳ್ಳಿಯಲ್ಲಿ ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ರೈಲು ಹಳಿ ದಾಟುತ್ತಿದ್ದ ವಿದ್ಯಾರ್ಥಿಗೆ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವೀರಣ್ಣಪಾಳ್ಯ ನಿವಾಸಿ ಶಶಿಕುಮಾರ್ (20) ಮೃತಪಟ್ಟ ವಿದ್ಯಾರ್ಥಿ. ಬೆಳಿಗ್ಗೆ ನಾಗೇನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ಘಟನೆ ನಡೆದಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.
ವೀರಣ್ಣಪಾಳ್ಯದ ನಿವಾಸಿ ವಾಸುದೇವ್ ಅವರ ಪುತ್ರ ಶಶಿಕುಮಾರ್ ಯಲಹಂಕದಲ್ಲಿ ಇರುವ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಬೆಳಿಗ್ಗೆ ಮನೆಯಿಂದ ಬಸ್ ನಿಲ್ದಾಣಕ್ಕೆ ಹೋಗುವಾಗ ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ನಾಗೇನಹಳ್ಳಿ ರೈಲ್ವೆ ಹಳಿ ದಾಟುತ್ತಿದ್ದಾಗ ಎಲೆಕ್ಟ್ರಿಕ್ ಎಂಜಿನ್‌ನ ಗೂಡ್ಸ್ ರೈಲು ಬಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಅಸು ನೀಗಿದ್ದಾನೆ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರುಗಳನ್ನು ಬಾಡಿಗೆಗೆ ಪಡೆದು ಮಾರಾಟ ಮಾಡುವ ವಂಚಕ
ಬಳ್ಳಾರಿಯಲ್ಲಿ ವಂಚಕನೊಬ್ಬ ಕಾರುಗಳನ್ನು ಬಾಡಿಗೆಗೆ ಪಡೆದು ಅವುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿರುವ ಪ್ರಕರಣ ಬಯಲಾಗಿದೆ. ರಾಯಚೂರು ಸಿಂಧನೂರು ಮೂಲದ ಮೊಹಮ್ಮದ್ ಜಾಹಿದ್ ಬಾಷಾ ಅಲಿಯಾಸ್ ಸೋನು ಆರೋಪಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ತಿಂಗಳಿಗೆ 50-60 ಸಾವಿರ ರೂ. ಬಾಡಿಗೆ ನೀಡುವುದಾಗಿ ಹೇಳಿ ಮಾಲೀಕರಿಂದ ಕಾರುಗಳನ್ನು ಬಾಡಿಗೆ ಪಡೆಯುತ್ತಿದ್ದ ಆರೋಪಿ ನಂತರ ಅವುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. ಆರಂಭದಲ್ಲಿ ಕಾರುಗಳ ಮಾಲೀಕರಿಗೆ ಒಂದು ತಿಂಗಳು ಬಾಡಿಗೆ ಕೊಡುತ್ತಿದ್ದ, ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.
ಜಿಪಿಎಸ್ ಟ್ರ್ಯಾಕ್ ಮಾಡಿದಾಗ ಕಾರು ಮಾರಾಟ ಮಾಡಿರುವುದು ಗೊತ್ತಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿಯ ಹಲವು ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು. ತನಿಖೆಗೆ ಇಳಿದಾಗ ಜಹೀದ್ 120 ಕಾರುಗಳ ಮಾಲೀಕರಿಗೆ ವಂಚನೆ ಮಾಡಿರುವುದು ಪತ್ತೆಯಾಗಿದೆ.
ಆರೋಪಿ ವಿರುದ್ಧ ಬಳ್ಳಾರಿಯ ಕೌಲ್ ಬಜಾರ್, ಬ್ರೂಸ್‌ಪೇಟೆ, ಗಾಂಧಿನಗರ ಮತ್ತು ಎಪಿಎಂಸಿ ಪೊಲೀಸ್ ಠಾಣೆಗಳಲ್ಲಿ ಹಲವಾರು ಎಫ್ಐಆರ್ ಗಳು ದಾಖಲಾಗಿವೆ. ಆರೋಪಿಯು ಕಾರುಗಳನ್ನೂ ಹಿಂದಿರುಗಿಸಿಲ್ಲ, ಬಾಡಿಗೆಯನ್ನೂ ಪಾವತಿಸಿಲ್ಲ. ಪೊಲೀಸರು 44 ವಾಹನಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಿಂತಿರುಗಿಸಿದ್ದಾರೆ.
ಕಡಿಮೆ ಬೆಲೆಗೆ ವಾಹನ ಖರೀದಿಸಿದವರಿಗೆ ಬಳ್ಳಾರಿಯ ಎಸ್ಪಿ ಶೋಭಾ ರಾಣಿ ವಿಜೆ ಎಚ್ಚರಿಕೆ ನೀಡಿದ್ದು, ಕದ್ದ ವಸ್ತುಗಳನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧ. ಕಾನೂನು ಕ್ರಮಗಳಿಂದ ಪಾರಾಗಬೇಕಾದರೆ
ಖರೀದಿದಾರರು ಸ್ವಯಂ ಆಗಿ ವಾಹನಗಳನ್ನು ಹಿಂತಿರುಗಿಸಬೇಕೆಂದು ಹೇಳಿದ್ದಾರೆ.