Wednesday, October 08, 2025
Menu

ಕೆಆರ್‌ಪೇಟೆ ಬಾಲಕಿಯ ಸಾಮೂಹಿಕ ಅತ್ಯಾಚಾರ: ವೃದ್ಧನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ 68 ವರ್ಷದ ವ್ಯಕ್ತಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ.

ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಲು ಕೋರಿ ಆರೋಪಿ ಚನ್ನಪ್ಪರ್ ಅಲಿಯಾಸ್​ ರಾಜಯ್ಯ (68) ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ನ್ಯಾಯಮೂರ್ತಿ ಎಸ್​.ರಾಚಯ್ಯ ಅವರ ಪೀಠವು, ಬಡತನ, ಮುಗ್ಧತೆ ಮತ್ತು ಸಮುದಾಯದ ಲಾಭ ಪಡೆದು ಲೈಂಗಿಕ ದೌರ್ಜನ್ಯ ನಡೆಸುವುದು ಕರುಣೆಯಿಲ್ಲದ ಕೃತ್ಯವೆಂದು ಹೇಳಿದೆ.

ಮೇಲ್ಮನವಿದಾರ ಆರೋಪಿ ಮತ್ತು ಇತರರು ಬಾಲಕಿಯ ಮೇಲೆ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದು ಖಂಡನೀಯ. ಮೇಲ್ಮನವಿದಾರನಿಗೆ ವಯಸ್ಸಾಗಿದೆ, ಈ ಘೋರ ಅಪರಾಧ ಮಾಡದಂತೆ ಇತರ ಆರೋಪಿಗಳಿಗೆ ಸಲಹೆ ನೀಡಬೇಕಿತ್ತು. ಕೃತ್ಯವನ್ನು ತಡೆಯಲು ಮುಂದಾಗಬೇಕಿತ್ತು. ಆದರೆ ಆತನೂ ಲೈಂಗಿಕ ದೌರ್ಜನ್ಯ ಎಸಗಿರುವುದು ಅತಿರೇಕದ ಸಂಗತಿ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ತಿನಿಸು ಮತ್ತು ಹೊಸ ಬಟ್ಟೆ ಕೊಡಿಸುವುದಾಗಿ ಸಂತ್ರಸ್ತೆಯನ್ನು ಪ್ರೇರೇಪಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಜಾಮೀನಿಗೆ ಅರ್ಹನಲ್ಲ ಎಂದು ಪೀಠ ಹೇಳಿದೆ. ಹೊಟ್ಟೆನೋವಿಂದ ನರಳುತ್ತಿದ್ದ ಸಂತ್ರಸ್ತೆಯನ್ನು ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದ್ದ ವೈದ್ಯರು ಆಕೆ ಗರ್ಭಿಣಿಯಾಗಿರುವುದಾಗಿ ತಿಳಿಸಿದ್ದರು. ದೂರು ದಾಖಲಿಸಿ ವಿಚಾರಣೆ ನಡೆಸಿದಾಗ ಅರ್ಜಿದಾರರು ಸೇರಿದಂತೆ ಐವರು ಲೈಂಗಿಕ ದೌರ್ಜನ್ಯ ಎಸಗಿರುವ ಸಂಗತಿ ಬಯಲಾಗಿತ್ತು. ಕೆ.ಆರ್​.ಪೇಟೆ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

Related Posts

Leave a Reply

Your email address will not be published. Required fields are marked *