ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಆರು ಮಕ್ಕಳು ಮತ್ತೆ ಮೃತಪಟ್ಟಿದ್ದು, ಈ ರಾಜ್ಯದಲ್ಲಿ ಕೆಮ್ಮು ಸಿರಪ್ ಸೇವನೆಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಈ ಮೊದಲು ಛಿಂದ್ವಾರದ 14 ಮಕ್ಕಳು ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿ ಅಸು ನೀಗಿರುವುದಾಗಿ ಸರ್ಕಾರ ದೃಢಪಡಿಸಿತ್ತು. ಬಳಿಕ ಛಿಂದ್ವಾರದಲ್ಲಿ 4 ಹಾಗೂ ಬೇತುಲ್‌ನಲ್ಲಿ 2 ಮಕ್ಕಳು ಮೃತಪಟ್ಟಿವೆ. ಇನ್ನೂ ಆರು ಮಕ್ಕಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಕ್ಕಳ ಸ್ಥಿತಿ ಗಂಭೀರವಾಗಿದೆ.
ಸಿರಪ್ ಸೇವಿಸಿ ಅಸ್ವಸ್ಥರಾದ ಮಕ್ಕಳ ಚಿಕಿತ್ಸೆಯ ಖರ್ಚನ್ನು ತಾನೇ ಭರಿಸುವುದಾಗಿ ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಈಗಾಗಲೇ ಔಷಧಿ ಉತ್ಪಾದಕ ಕಂಪನಿಗೆ ತಮಿಳುನಾಡು ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಪಂಜಾಬ್ ಸರ್ಕಾರ ಕೂಡ ಸಿರಪ್ ಅನ್ನು ನಿಷೇಧಿಸಿದೆ. ಸಿರಪ್ ಕುರಿತು ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟಿಗೂ ಅರ್ಜಿ ಸಲ್ಲಿಕೆಯಾಗಿದೆ.
ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಡ್ರಿಫ್ ಸಿರಪ್ ಶಿಫಾರಸು ಮಾಡಿದ ವೈದ್ಯನನ್ನು ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಬಂಧಿಸಲಾಗಿದೆ. ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿಯ ಚಿಕಿತ್ಸಾಲಯದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ವೈದ್ಯ ಕೋಲ್ಡ್ರಿಫ್ ಸಿರಪ್ ನೀಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರವು ಈ ಹಿಂದೆ ಕೋಲ್ಡ್ರಿಫ್ ಮಾರಾಟವನ್ನು ನಿಷೇಧಿಸಿತ್ತು. ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ಪರೀಕ್ಷಿಸಿದ ಸಿರಪ್‌ನ ಮಾದರಿ ಪ್ರಮಾಣಿತ ಗುಣಮಟ್ಟದಲ್ಲಿಲ್ಲ ಎಂದು ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯ ಹೇಳಿದೆ.
ಮಕ್ಕಳು ಶೀತ, ಜ್ವರದ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೆಮ್ಮಿನ ಸಿರಪ್ ಸೇರಿದಂತೆ ನಿಯಮಿತ ಔಷಧಿ ಶಿಫಾರಸು ಮಾಡಲಾಗಿತ್ತು. ಅದನ್ನು ಸೇವಿಸಿ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಕೆಲವೇ ದಿನಗಳಲ್ಲಿ ಮತ್ತೆ ಕೆಮ್ಮು ಉಲ್ಬಣಗೊಂಡು ಮೂತ್ರಪಿಂಡದಲ್ಲಿ ಸೋಂಕು ಕಾಣಿಸಿಕೊಂಡು ಮಕ್ಕಳು ಅಸು ನೀಗಿವೆ ಎಂದು ಸಂತ್ರಸ್ತ ಕುಟುಂಬಗಳು ಹೇಳಿಕೊಂಡಿವೆ.