Menu

ಮೈಸೂರಿನಲ್ಲಿ ಹಾಡುಹಾಗಲೇ ಆಟೋ ಚಾಲಕನ ಬರ್ಬರ ಹತ್ಯೆ

mysore murder

ಹಾಡುಹಾಗಲೇ ಅರಮನೆ ಸಮೀಪ ಪ್ರವಾಸಿಗರ ಎದುರಿನಲ್ಲೇ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಗುಂಪೊಂದು ಕೊಚ್ಚಿ ಕೊಲೆ ಮಾಡಿದ ಘಟನೆ ಮೈಸೂರಿನಲ್ಲಿ ಮಂಗಳವಾರ ನಡೆದಿದೆ.

ಮೈಸೂರಿನ ದೊಡ್ಡಕೆರೆ ಮೈದಾನದ ಬಳಿ ದಸರಾ ವಸ್ತುಪ್ರದರ್ಶನ ರಸ್ತೆಯಲ್ಲಿ ಆಟೋ ಓಡಿಸುತ್ತಿದ್ದ ಮೈಸೂರಿನ ಕ್ಯಾತಮಾರನಹಳ್ಳಿಯ ಅಶ್ವತ್ಥಕಟ್ಟೆ ಬಳಿಯ ನಿವಾಸಿ ವೆಂಕಟೇಶ್ ಅಲಿಯಾಸ್ ಗಿಲ್ಕಿ ವೆಂಕಟೇಶ್ (38 ಅವರನ್ನು ಕೊಲೆ ಮಾಡಲಾಗಿದೆ.

ಆಟೋ ಚಾಲನೆ ಮಾಡುತ್ತಿದ್ದ ಅವರು, ತಮ್ಮ ಮಾರುತಿ ಸ್ವಿಫ್ಟ್ (ಕೆಎ ೦೫, ಎನ್.ಬಿ. ೯೫೭೪) ಕಾರಿನಲ್ಲಿ ಅರಮನೆ ಪೂರ್ವದ್ವಾರದ ಬಿ.ಎನ್. ರಸ್ತೆ ಕಡೆಯಿಂದ ದಸರಾ ವಸ್ತುಪ್ರದರ್ಶನ ರಸ್ತೆ ಮೂಲಕ ಇಟ್ಟಿಗೆಗೂಡು ಕಡೆಗೆ ಹೋಗುತ್ತಿದ್ದಾಗ ಇಂದು ಬೆಳಿಗ್ಗೆ ಸುಮಾರು ೧೧.೩೦ ಗಂಟೆ ವೇಳೆ ಜ್ವಾಲಾಮುಖಿ ಹೋಟಲ್ ಜಂಕ್ಷನ್ ಸಮೀಪ ಅರಳಿಮರದ ಬಳಿ ಹಿಂದಿನಿMದ ಆಟೋ, ದ್ವಿಚಕ್ರ ವಾಹನದಲ್ಲಿ ಬಂದ ಆರು ಮಂದಿಯ ಗುಂಪು, ಕಾರು ಅಡ್ಡಗಟ್ಟಿ ವೆಂಕಟೇಶ್ ಕಣ್ಣಿಗೆ ಖಾರದಪುಡಿ ಎರಚಿ, ಮಚ್ಚು-ಲಾಂಗ್‌ನಿಂದ ಮನಸೋ ಇಚ್ಛೆ ಕೊಚ್ಚಿ ಕೊಲೆಗೈದು ಪರಾರಿಯಾಗಿದೆ.

ಕಳೆದ ಮಾರ್ಚ್ ಮಾಹೆಯಲ್ಲಿ ವರುಣಾ ಬಳಿ ಟಿ.ನರಸೀಪುರ ರಸ್ತೆಯಲ್ಲಿರುವ ಹೋಟೆಲ್‌ವೊಂದರ ಮುಂದೆ ಇದೇ ಮಾದರಿಯಲ್ಲಿ ಕೊಲೆಯಾಗಿದ್ದ ರೌಡಿಶೀಟರ್ ಕಾರ್ತಿಕ್ ಜೊತೆ ವೆಂಕಟೇಶ್ ಗುರ್ತಿಸಿಕೊಂಡಿದ್ದನಲ್ಲದೇ ಇಬ್ಬರ ನಡುವೆಯೂ ಹಣಕಾಸು ವಿಚಾರದ ಸಂಬಂಧ ವೈಷಮ್ಯ ಉಂಟಾಗಿತ್ತು ಎಂದು ಹೇಳಲಾಗಿದೆ.

ಖಾರದಪುಡಿ ಎರಚಿ ಕಗ್ಗೊಲೆ

ಇಂದು ಹತ್ಯೆಗೈದ ವ್ಯಕ್ತಿಗಳು ಈ ಹಿಂದೆ ಹಲವು ದಿನಗಳಿಂದ ವೆಂಕಟೇಶ್ ಓಡಾಡುತ್ತಿದ್ದ ಸ್ಥಳಗಳಲ್ಲಿ ನಿಂತು ಚಲನ-ವಲನಗಳನ್ನು ವೀಕ್ಷಿಸಿ ಕೊಲೆ ಮಾಡಲು ಹೊಂಚುಹಾಕುತ್ತಿದ್ದರು ಎಂದು ಆತ ಪೋಲಿಸರಿಗೆ ಮಾಹಿತಿ ನೀಡಿದ್ದನು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ಹಿಂದೆ ಗುಂಪು ವೆಂಕಟೇಶ್‌ನ ಮೇಲೆ ಎರಡು ಬಾರಿ ಹಲ್ಲೆ ನಡೆಸಿ ಕೊಲೆಗೆ ವಿಫಲ ಯತ್ನ ನಡೆಸಿತ್ತು. ಆದರೆ ಇದೀಗ ಮೂರನೇ ಬಾರಿಗೆ ಜನನಿಬಿಡ ಪ್ರದೇಶದಲ್ಲೇ ದಾಳಿಮಾಡಿ ಆತನನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆಯೂ ವೆಂಕಟೇಶ್ ಪೋಲಿಸರಿಗೆ ದೂರು ನೀಡಿದ್ದರು ಎಂದೂ ಕುಟುಂಬ ಸದಸ್ಯರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಕಾರು ಅಡ್ಡಗಟ್ಟಿ ವ್ಯಕ್ತಿಯನ್ನು ಹೊರಕ್ಕೆಳೆದು ಮಚ್ಚು-ಲಾಂಗ್‌ಗಳಿಂದ ಕೊಚ್ಚಿ ಕೊಲೆಗೈದ ದೃಶ್ಯವನ್ನು ಅಲ್ಲಿದ್ದ ಸಾರ್ವಜನಿಕರು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹರಿದು ಬಿಟ್ಟಿದ್ದಾರೆ. ಆದರೆ, ವೀಡಿಯೋ ಮಾಡಲು ಪ್ರಯತ್ನಿನಿಸಿದರಾದರೂ ದುಷ್ಕರ್ಮಿಗಳು ಅವರತ್ತ ಲಾಂಗ್ ತೋರಿದ್ದರಿಂದ ಹೆದರಿ, ರೆಕಾರ್ಡ್ ಮಾಡಲಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಪೋಲಿಸ್ ಕಮೀಷ್ನರ್ ಸೀಮಾ ಲಾಟ್ಕರ್, ಡಿಸಿಪಿಗಳಾದ ಕೆ.ಎಸ್. ಸುಂದರ್‌ರಾಜ್, ಆರ್.ಎನ್. ಬಿಂದುಮಣಿ, ದೇವರಾಜ ಉಪ ವಿಭಾದ ಎಸಿಪಿ ಕೆ. ರಾಜೇಂದ್ರ, ನಜರ್‌ಬಾದ್ ಠಾಣೆ ಇನ್ಸ್ಪೆಕ್ಟರ್ ಮಹದೇವಸ್ವಾಮಿ, ದೇವರಾಜ ಠಾಣೆ ಇನ್ಸ್ಪೆಕ್ಟರ್ ರಘು, ಸಿಸಿಬಿ ಇನ್ಸ್ಪೆಕ್ಟರ್ ಲೇಪಾಕ್ಷ, ಶ್ವಾನದಳ ಮತ್ತು ನಗರ ಬೆರಳಚ್ಚು ಮುದ್ರೆ ವಿಭಾಗದ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು.

ಪ್ರಕರಣ ದಾಖಲಿಸಿಕೊಂಡಿರುವ ನಜರ್‌ಬಾದ್ ಠಾಣೆ ಪೋಲಿಸರು ಸ್ಥಳ ಮಹಜರು ನಡೆಸಿ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

ಘಟನಾ ಸ್ಥಳದಲ್ಲಿ ಸಾರ್ವಜನಿಕರು ತೆಗೆದಿರುವ ಫೋಟೋ ಹಾಗೂ ಆ ಮಾರ್ಗದಲ್ಲಿರುವ ಸಿಸಿ ಕ್ಯಾಮರಗಳ ಫುಟೇಜ್‌ಗಳ ಸುಳಿವಿನ ಜಾಡು ಹಿಡಿದ ಪೋಲಿಸರು ಕೊಲೆಗೈದು ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗಾಗಿ ಎರಡು ತನಿಖಾ ತಂಡಗಳನ್ನು ರಚಿಸಲಾಗಿದ್ದು ಈಗಾಗಲೇ ಆರೋಪಿಗಳ ಬಗ್ಗೆ ಕೆಲ ಮಾಹಿತಿಗಳನ್ನು ಕಲೆಹಾಕಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

Related Posts

Leave a Reply

Your email address will not be published. Required fields are marked *