ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಣಜನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಗೆ ಪೆಟ್ರೋಲ್ ಸುರಿದು ಬೆಂಕ ಹಚ್ಚಿ ಕೊಂದಿದ್ದಾನೆ.
ಸುನೀತಾ (25) ಕೊಲೆಯಾದ ಮಹಿಳೆ, ಆಕೆಯ ಪತಿ ಲಿಂಗರಾಜ್ ಕೊಲೆಗಾರ. ನಾಲ್ಕು ವರ್ಷಗಳ ಹಿಂದೆ ಲಿಂಗರಾಜ್ ಹಾಗೂ ಸುನೀತಾ ಮದುವೆ ಆಗಿದ್ದರು. ದಂಪತಿಗೆ ಮಕ್ಕಳಾಗಿರಲಿಲ್ಲ. ಯಾವಾಗಲೂ ಲಿಂಗರಾಜ್ ಪತ್ನಿಯ ಶೀಲ ಶಂಕಿಸಿ ಜಗಳ ಮಾಡುತ್ತಿದ್ದ. ಸೋಮವಾರ ಪತ್ನಿಯನ್ನು ಜಮೀನಿಗೆ ಕರೆದೊಯ್ದು ಕೊಲೆ ಮಾಡಿ ಸುಟ್ಟು ಹಾಕಿದ್ದಾನೆ.
ಕೃತ್ಯ ಎಸಗುವ ವೇಳೆ ಆರೋಪಿ ಲಿಂಗರಾಜ್ ಗಾಯಗೊಂಡಿದ್ದಾನೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಭೇಟಿ ನೀಡಿದ್ದು, ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸುರಪುರದಲ್ಲಿ ಸೆಕ್ಸ್ಗೆ ಒಪ್ಪದ ಪತ್ನಿಯ ಕೊಲೆ
ಯಾದಗಿರಿ ಜಿಲ್ಲೆಯ ಸುರಪುರದ ನಗರದ ಡೊಣ್ಣಿಗೇರ ಬಡಾವಣೆಯಲ್ಲಿ ದೈಹಿಕ ಸಂಪರ್ಕಕ್ಕೆ ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಸಂಗಪ್ಪ ಎಂಬಾತ ಪತ್ನಿ ಮರೆಮ್ಮ ಎಂಬಾಕೆಯನ್ನು ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಸ್ಥಳಕ್ಕೆ ಸುರಪುರ ಠಾಣೆಯ ಪೊಲೀಸರು ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಗಂಡ ಹೆಂಡತಿ ಮಧ್ಯೆ ರಾತ್ರಿ ದೈಹಿಕ ಸಂಪರ್ಕ ವಿಚಾರವಾಗಿ ಜಗಳವಾಗಿತ್ತು. ಪತ್ನಿ ದೈಹಿಕ ಸಂಪರ್ಕಕ್ಕೆ ಒಪ್ಪಿರಲಿಲ್ಲ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದ್ದು ಕೊಲೆಯಲ್ಲಿ ಕೊನೆಗೊಂಡಿದೆ.
ಸಂಗಪ್ಪ ಎರಡು ದಿನಗಳ ಹಿಂದೆ ತನ್ನ ಊರಾದ ಕಕ್ಕೇರದಿಂದ ಸುರಪುರಕ್ಕೆ ಬಂದಿದ್ದ. ಗಂಡ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಒಂದು ವರ್ಷದಿಂದ ಮರೆಮ್ಮ ತವರು ಮನೆಯಲ್ಲಿದ್ದರು. ಭಾನುವಾರ ಸುರಪುರಕ್ಕೆ ಬಂದ ಸಂಗಪ್ಪ ಪತ್ನಿಯನ್ನು ದೈಹಿಕ ಸಂಪರ್ಕಕ್ಕೆ ಆಗ್ರಹಿಸಿದ್ದಾನೆ. ಒಪ್ಪದಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.