ಹರಿದ್ವಾರದ ದಕ್ಷಿಣ ಕಾಳಿ ದೇಗುಲಕ್ಕೆ ಅರೆಬರೆ ಬಟ್ಟೆ ಧರಿಸಿ ಬಂದಿದ್ದ ಯುವತಿ ಪ್ರವೇಶ ನಿರಾಕರಿಸಿದ್ದಕ್ಕೆ ಸಿಟ್ಟಾಗಿ ಅರ್ಚಕರು ಮತ್ತು ಪೊಲೀಸರೊಂದಿಗೆ ಗಲಾಟೆ ಮಾಡಿರುವ ವೀಡಿಯೊ ವೈರಲ್ ಆಗಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಯುವತಿ ಮೊಣಕಾಲಿಗಿಂತ ಮೇಲೆ ನಿಲ್ಲುವ ಶಾರ್ಟ್ಸ್ ಮತ್ತು ಟೀ ಶರ್ಟ್ ಧರಿಸಿ ದೇಗುಲಕ್ಕೆ ಬಂದಿದ್ದಳು. ದೇಗುಲದ ಪ್ರವೇಶದ್ವಾರದಲ್ಲಿ ಅರ್ಚಕರು ಮತ್ತು ಪೊಲೀಸರು ಗಮನಿಸಿ ಒಳಗೆ ಬಿಡಲು ನಿರಾಕರಿಸಿದರು. ಹಿಂದೂ ದೇವಸ್ಥಾನಗಳಲ್ಲಿ ಮೈತೋರಿಸುವ ಬಟ್ಟೆಗಳಿಗೆ ಅನುಮತಿ ಇಲ್ಲ ಎಂಬ ನಿಯಮ ಇರುವುದಾಗಿ ಹೇಳಿದರು.
ಇದರಿಂದ ಸಿಟ್ಟಾದ ಯುವತಿ ಜಗಳ ಶುರುಮಾಡಿ, ಇಂತಹ ನಿಯಮಗಳನ್ನು ದೇವರು ಮಾಡಿಲ್ಲ, ಜನರು ಮಾಡಿದ್ದು ಎಂದು ಹೇಳಿದಳು. ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದೆ.
ವೀಡಿಯೊದಲ್ಲಿ ಯುವತಿ ಪೊಲೀಸರೊಂದಿಗೆ ವಾಗ್ವಾದ ಮಾಡುವುದು, ನಾನು ಯಾರ ಮಾತನ್ನೂ ಕೇಳುವುದಿಲ್ಲ, ನೀವು ಜನರೊಂದಿಗೆ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯಬೇಕು ಎಂದು ಹೇಳುವುದು ಸ್ಪಷ್ಟವಾಗಿದೆ. ವೀಡಿಯೊ ಮಾಡಿದ ಮಹಿಳೆಯೊಬ್ಬರ ಧ್ವನಿ ಕೇಳುತ್ತಿದ್ದು, “ಇವಳು ಶಾರ್ಟ್ಸ್ ಧರಿಸಿ ಬಂದಿದ್ದಾಳೆ, ಇದು ಸರಿಯಲ್ಲ. ಪೊಲೀಸರು ಸರಿಯಾಗಿ ಮಾಡಿದ್ದಾರೆ” ಎಂದು ಕಾಮೆಂಟ್ ಮಾಡುವುದು ಕೂಡ ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ವೈರಲ್ ಆದ ನಂತರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅನೇಕರು ಅರ್ಚಕರು ಮತ್ತು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಕೆಲವರು ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ. “ವಸ್ತ್ರ ಸಂಹಿತೆ ಲಿಂಗ ತಾರತಮ್ಯದಂತಿದೆ, ಆಧುನಿಕ ಕಾಲದಲ್ಲಿ ಬದಲಾವಣೆ ಬೇಕು” ಎಂದು ವಾದಿಸಿದ್ದಾರೆ.