Menu

ಮ್ಯಾಟ್ರಿಮೊನಿಯಲ್ಲಿ ಸಿಕ್ಕ ಯುವ ಪ್ರಿಯಕರ: ನಿವೃತ್ತ ಶಾಲಾ ಶಿಕ್ಷಕಿಗೆ 2.3 ಕೋಟಿ ರೂ. ವಂಚನೆ

ಬೆಂಗಳೂರಿನ ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿ ಸ್ನೇಹಿತನಾದ ಯುವಕನ ಮಾತು ನಂಬಿ 2.3 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. 4 ವರ್ಷಗಳಲ್ಲಿ ಈ ಪ್ರಮಾಣದ ಹಣ ಕಳೆದುಕೊಂಡಿರುವ ಶಿಕ್ಷಕಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು ಮೂಲದ 59 ವರ್ಷದ ಮಹಿಳೆ ಹಲವು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡು ಏಕಾಂಗಿಯಾಗಿದ್ದರು. ಹೊಸ ಸಂಗಾತಿಯ ನಿರೀಕ್ಷೆಯಿಂದ 2019 ರಲ್ಲಿ ಮ್ಯಾಟ್ರಿಮೊನಿ ವೆಬ್​ಸೈಟ್​ನಲ್ಲಿ ಹೆಸರು ನೋಂದಾಯಿಸಿದ್ದರು. ಅಲ್ಲಿ ಸಿಕ್ಕ ಯುವಕ ಪ್ರಿಯಕರನಾಗಿ ಮಹಿಳೆಗೆ 2.3 ಕೋಟಿ ರೂ. ವಂಚಿಸಿದ್ದಾನೆ.

2019ರ ಡಿಸೆಂಬರ್​ನಲ್ಲಿ ಮ್ಯಾಟ್ರಿಮೊನಿಯಲ್ಲಿ ತನಗೆ ಅಹಾನ್ ಕುಮಾರ್ ಎಂಬಾತನ ಪರಿಚಯವಾಗಿತ್ತು. ಆತ ತಾನು ಭಾರತ ಮೂಲದ ಅಮೆರಿಕ ಪ್ರಜೆ, ಅಟ್ಲಾಂಟಾದಲ್ಲಿ ಇಸ್ರೇಲ್ ಆಯಿಲ್‌ ಕಂಪನಿಯೊಂದರಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿರುವುದಾಗಿಯೂ ಹೇಳಿದ್ದ. ಸದ್ಯ ಬ್ಲ್ಯಾಕ್ ಸೀ ನಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ಗುರುತಿನ ಚೀಟಿಯನ್ನೂ ತೋರಿಸಿದ್ದ. ಅದರಲ್ಲಿ ಆತನ ಪೋಟೊ ಇಲ್ಲದಿದ್ದರೂ  ಅನುಮಾನ ಬರಲಿಲ್ಲ.

ಕ್ರಮೇಣ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಯಾಗಿತ್ತು, ಅಹಾನ್ ಆಕೆಯನ್ನೇ ಮದುವೆಯಾಗುವುದಾಗಿ ನಂಬಿಸಿದ್ದ. ಪ್ರತಿನಿತ್ಯ ವಾಟ್ಸಾಪ್ ಮೂಲಕ ಮಾತನಾಡುತ್ತಿದ್ದ ಅಹಾನ್, ಭಾರತಕ್ಕೆ ಶೀಘ್ರ ಮರಳುವುದಾಗಿ ತಿಳಿಸಿದ್ದ. 2020 ರಲ್ಲಿ ಆತ ತನಗೆ ಸಂಬಳ ವಿಳಂಬವಾಗುತ್ತಿದೆ, ಊಟ ಮಾಡಲೂ ತನ್ನ ಬಳಿ ಹಣವಿಲ್ಲವೆಂದು ಹೇಳಿ ಮಹಿಳೆಯಲ್ಲಿ ಸಹಾಯ ಬೇಡಿದ್ದ. ಇದನ್ನು ನಂಬಿ ಆಕೆ ಮಾಧವಿ ಎನ್ನುವವರ ಖಾತೆಗೆ ಹಣ ಕಳುಹಿಸಿದ್ದರು. 4 ವರ್ಷ ಹೀಗೆಯೆ ಆಸ್ಪತ್ರೆಯ ಬಿಲ್, ಇತರ ಶುಲ್ಕದ ಹೆಸರಿನಲ್ಲಿ ಅಹಾನ್ ಹಣ ಕೇಳುತ್ತಲೇ ಇದ್ದ. ಮಹಿಳೆ ಹಣ ಕಳುಹಿಸುತ್ತಲೇ ಇದ್ದರು.

2024ರ ನವೆಂಬರ್ ಹೊತ್ತಿಗೆ ಅವನ ಬೇಡಿಕೆಯಿಂದ ಬೇಸತ್ತಿದ್ದ ಮಹಿಳೆ ಹಣ ನೀಡುವುದನ್ನು ನಿಲ್ಲಿಸಿದ್ದರು. ಆತ ಕೂಡ ಈಕೆಯ ಸಂಪರ್ಕ ಬಿಟ್ಟಿದ್ದ. ಒಂದು ವರ್ಷಆತ ಹಣವನ್ನು ಹಿಂದಿರುಗಿಸುತ್ತಾನೆಂದು ಮಹಿಳೆ ಕಾದಿದ್ದು,
ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸ್ ಅಧಿಕಾರಿಗಳು ಐಟಿ ಆ್ಯಕ್ಟ್ ಅಡಿಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *